ಭಾರತೀಯ ಕಲ್ಪನೆಯಲ್ಲಿ ಗುರು ಪರಂಪರೆ ಶಕ್ತಿಯುತ

5-pnp 1
Published on

ಪಾಂಡವಪುರ: ಭಾರತೀಯರ ಕಲ್ಪನೆಯಲ್ಲಿ ಗುರು ಪರಂಪರೆ ಬಹಳ ಶಕ್ತಿಯುತವಾಗಿದ್ದು, ಪುರಾಣ ಕಾಲದಿಂದಲೂ ಗುರು ಪರಂಪರೆ ಬೆಳೆದುಬಂದಿದೆ ಎಂದು ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಹೇಳಿದರು.


ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.


ಗುರುಗಳಿಗೆ ಕಳ್ಳನನ್ನು ಮನಪರಿವರ್ತನೆ ಮಾಡುವ ಶಕ್ತಿ ಇದ್ದು, ಮಕ್ಕಳ ಆಲೋಚನಾ ಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ಬೋಧನೆ ಮಾಡಬೇಕು ಎಂದರು.


ಶಿಕ್ಷಕರು ಕಲಿಯುವ ಆಸಕ್ತಿ ಹೊಂದಿರುವ ಮಕ್ಕಳಿಗೆ ತಮಗೆ ಗೊತ್ತಿರುವುದನ್ನು ಬೋಧನೆ ಮಾಡುತ್ತಾರೆ. ಹಿಂದೆ ಗುರುಗಳು ಜ್ಞಾನದ ಹಸಿವಿನ ಜತೆಗೆ ಹೊಟ್ಟೆ ಹಸಿವು ನೀಗಿಸುವ ಶಿಕ್ಷಣ ನೀಡುತ್ತಿದ್ದರು. ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಂಡು, ಗುರುಗಳು ನೀಡುವ ಶಿಕ್ಷಣ ಕಲಿತು ಉಜ್ವಲ ಭವಿಷ್ಯರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ದೇಶದ ಭವಿಷ್ಯ ರೂಪಿಸುವ ಮಕ್ಕಳ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಹಾಗಾಗಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.


ಪಟ್ಟಣದ ಶಿಕ್ಷಕರ ಭವನ ಅಭಿವೃದ್ಧಿಪಡಿಸುವಂತೆ ಶಿಕ್ಷಕರ ಸಂಘದವರು ಮನವಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭವನ ಅಭಿವೃದ್ಧಿಪಡಿಸಲಾಗುವುದು, ಜತೆಗೆ ಭವನದ ಮೇಲೆ ಮಕ್ಕಳ ಪ್ರಯೋಗ, ಹೊಸ ಹೊಸ ಅಧ್ಯಯನ ನಡೆಸಲು ಲುಕ್ ಸೆಂಟರ್ ತೆರೆಯಲು ಕ್ರಮವಹಿಸಲಾಗುವುದು, ಶಿಕ್ಷಕರು ಸಹ ಕಾಲ ಕಾಲಕ್ಕೆ ತಕ್ಕಂತೆ ಹೊಸ ಟೆಕ್ನಾಲಜಿಗಳನ್ನು ಅಳವಡಿಸಿಕೊಳ್ಳಬೇಕು ಎಂದರು.


ಇಒ ಲೋಕೇಶ್ ಮೂರ್ತಿ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಮಕ್ಕಳ ನಮ್ಮ ನಡೆ-ನುಡಿಗಳನ್ನು ನೋಡಿ ಕಲಿಯುತ್ತವೆ, ಹಾಗಾಗಿ ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.


ತಹಸೀಲ್ದಾರ್ ಸಂತೋಷ್ ಮಾತನಾಡಿದರು. ನಿವೃತ್ತಿ ಹೊಂದಿದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಶಿಕ್ಷಕರು, ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಧನಂಜಯ್ ಬರೆದಿರುವ ‘ಸ್ಫೂರ್ತಿ ಸೌರಭ’ ಕೃತಿ ಬಿಡುಗಡೆ ಮಾಡಲಾಯಿತು.


ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಎಲ್.ಅಶೋಕ್, ಬಿಇಒ ರವಿಕುಮಾರ್, ಬಿಆರ್‌ಸಿ ಪ್ರಕಾಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಪ್ರಾ.ಶಾ.ಶಿ.ಸ.ಅಧ್ಯಕ್ಷ ಮಂಜುನಾಥ್, ಯುವರಾಜ, ತ್ಯಾಗರಾಜು, ಕರುಣಾಕುಮಾರ್, ಸಿಆರ್ ಪಿ ಅನಸೂಯಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net