ಸರ್ಕಾರದ ನಿರ್ಧಾರ ಖಂಡನೀಯ

ಸರ್ಕಾರದ ನಿರ್ಧಾರ ಖಂಡನೀಯ
Published on

ಪಿರಿಯಾಪಟ್ಟಣ: ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಇರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಿರುವ ಸರ್ಕಾರದ ನಿರ್ಧಾರ ಖಂಡನೀಯ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಿ.ರಾಜೇಂದ್ರ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಇರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರದ ಮುಂಭಾಗ ಶನಿವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದರು. ದೀನ ದಲಿತರು, ಬಡವರು, ಕೂಲಿ ಕಾರ್ಮಿಕರು, ಆರ್ಥಿಕವಾಗಿ ಹಿಂದುಳಿದವರಿಗೆ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಸರಬರಾಜು ಮಾಡುವ ಉದ್ದೇಶದಿಂದ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳ ಆವರಣ ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಹಲವು ವರ್ಷಗಳಿಂದ ಈ ಕೇಂದ್ರಗಳು ಜನಪ್ರಿಯಗೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಕೇಂದ್ರ ಸರ್ಕಾರದ ಈ ಜನಪ್ರಿಯ ಯೋಜನೆಯನ್ನು ಸಹಿಸಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಿರುವುದನ್ನು ಬಿಜೆಪಿಯು ವಿರೋಧಿಸುತ್ತಿದೆ ಎಂದರು.

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳ ಆಸುಪಾಸಿನಲ್ಲಿರುವ ಖಾಸಗಿ ಮೆಡಿಕಲ್ ಸ್ಟೋರ್‌ಗಳ ಆಮಿಷಕ್ಕೆ ಒಳಗಾಗಿರುವ ರಾಜ್ಯ ಸರ್ಕಾರವು ಕಮಿಷನ್ ಆಸೆಗಾಗಿ ಈ ನಿರ್ಧಾರ ಕೈಗೊಂಡಿರುವುದು ದುರಂತ ಎಂದರು. ಸರ್ಕಾರ ಈ ನಿರ್ಧಾರದಿಂದ ಕೂಡಲೇ ಹಿಂದೆಸರಿಯದಿದ್ದರೆ ಪಕ್ಷದ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳಾದ ಪಿ.ಜೆ.ರವಿ, ನಳಿನಿ, ಲೋಕಪಾಲಯ್ಯ, ರಮೇಶ್, ಕಿರಣ್, ಚನ್ನಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net