ಸ್ವಾರ್ಥ ಸಾಧನೆಗಾಗಿ ರೈತರನ್ನು ಬಲಿಕೊಟ್ಟ ಸರ್ಕಾರ

IMG-20240310-WA0187
Published on

ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ತನ್ನ ರಾಜಕೀಯ ಹಿತಾಸಕ್ತಿ ಹಾಗೂ ಸ್ವಾರ್ಥ ಸಾಧನೆಗಾಗಿ ರಾಜ್ಯದ ಜನರು ಹಾಗೂ ರೈತರನ್ನು ಬಲಿಕೊಟ್ಟಿದ್ದು, ನೀರು ಹರಿಸುತ್ತಿರುವುದನ್ನು ತಕ್ಷಣ ಸ್ಥಗಿತಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಎಚ್ಚರಿಕೆ ನೀಡಿದರು.


ಪಟ್ಟಣದ ಸ್ನಾನಘಟ್ಟದಲ್ಲಿರುವ ಕಾವೇರಿ ನದಿಯೊಳಗೆ ಭಾನುವಾರ ಭೂಮಿ ತಾಯಿ ಹೋರಾಟ ಸಮಿತಿ ಕಾರ್ಯಕರ್ತರೊಂದಿಗೆ ಇಳಿದು ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ನೀತಿ ಬಳಸಿ ಹೈಕಮಾಂಡ್ ನಿಂದ ಶಹಬ್ಬಾಸ್ ಪಡೆಯಲು ರಾಜ್ಯದ ರೈತರನ್ನು ಬಲಿಕೊಟ್ಟಿದ್ದಾರೆ. ಭೀಕರ ಬರಗಾಲದ ನಡುವೆಯೂ ಅನ್ಯ ರಾಜ್ಯದ ಜನರ ಹಿತಕಾದ ಏಕೈಕ ಸರ್ಕಾರ ಕಾಂಗ್ರೆಸ್. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ನೆಪವೊಡ್ಡಿ ನದಿ ಮೂಲಕ ನಿತ್ಯ 4.5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.


ತಕ್ಷಣ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಹಿತಕಾಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಎಂ.ವಿ.ಕೃಷ್ಣ, ಕಿರಂಗೂರು ಮಹದೇವು ಪಿ.ಹೊಸಹಳ್ಳಿ, ದೊಡ್ಡಪಾಳ್ಯ ಜಗದೀಶ್, ಚೊಟ್ಟನಹಳ್ಳಿ ದರ್ಶನ್, ಸ್ವಾಮಣ್ಣ,ಹೊಸೂರು ಶಿವಣ್ಣ, ಶಿವರಾಜು, ಚಿಂದಗಿರಿಕೊಪ್ಪಲು ಕೆಂಪೇಗೌಡ, ರಾಮಚಂದ್ರು, ದರಸಗುಪ್ಪೆ ಸುರೇಶ್, ಮಹೇಶ್, ರವಿಲಕ್ಷ್ಮಣ, ಕೃಷ್ಣ, ಕಡತನಾಳು ಚಾಮೇಗೌಡ, ಬಾಬು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net