ಮೂರನೇ ಬಾರಿಗೆ ಮೋದಿ ಪ್ರಧಾನಿ ಮಾಡುವುದೇ ಗುರಿ

1712924150977~2
Published on

ತಿ.ನರಸೀಪುರ: ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಮೈತ್ರಿ ಪಕ್ಷದ ಗುರಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.


ತಾಲೂಕಿನ ಬನ್ನೂರು ಪಟ್ಟಣದ ಸರ್ವಮಂಗಳ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮಾಜಿ ಪ್ರಧಾನಿ ದೇವೇಗೌಡರು ದೇಶದ ಪ್ರಧಾನಿಯಾಗುವ ಅರ್ಹತೆ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಈ ಸಂದರ್ಭದಲ್ಲಿ ಬೇರೆ ಯಾರಿಗೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದ ಏಕತೆ, ಅಖಂಡತೆ, ರಕ್ಷಣೆ, ಅಭಿವೃದ್ಧಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಹಾಗಾಗಿ 2024ಕ್ಕೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಎರಡೂ ಪಕ್ಷಗಳ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಹೇಳಿದಂತೆ ಯಾವ ಗ್ಯಾರಂಟಿ ಯೋಜನೆಯನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದ ಈ ಸಂದರ್ಭದಲ್ಲಿಯೂ ಸರ್ಕಾರ ನೆರವಿಗೆ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ರೈತರಿಗೆ ಉಳಿದಿರುವ ದಾರಿಯಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಯೋಜನೆ ಎಂಬಂತಾಗಿದೆ ಎಂದು ದೇವೇಗೌಡರು ಟೀಕಿಸಿದರು.


ಗ್ಯಾರಂಟಿ ಸಮರ್ಪಕ ಜಾರಿಯಾಗಿಲ್ಲ: ಮಾತೆತ್ತಿದರೆ 5 ಗ್ಯಾರಂಟಿ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಸಿದ್ರಾಮಣ್ಣ ಕೊಚ್ಚಿಕೊಳ್ಳುತ್ತಾರೆ.ಆದರೆ ಯಾವುದನ್ನೂ ಸಮರ್ಪಕವಾಗಿ ಜಾರಿ ಮಾಡಲಾಗಿಲ್ಲ. ಸರ್ಕಾರ ಜಾಣ ನಡೆ ಪ್ರದರ್ಶನ ಮಾಡಿ ಜನರ ಕಣ್ಷಿಗೆ ಮಣ್ಣೆರಚುವ ಕೆಲಸ ಮಾಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ 2 ಸಾವಿರ ನೀಡಿ ಮದ್ಯದ ದರ ಹೆಚ್ಚಿಸಿ ಒಂದು ಕೈಯಿಂದ ಕೊಟ್ಟು ಇನ್ನೊಂದು ಕೈಯಿಂದ ಕಿತ್ತು ಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.


ಮೈತ್ರಿ ಕೂಟದ ಅಭ್ಯರ್ಥಿ ಬಾಲರಾಜು ಮಾತನಾಡಿ, 31 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ, ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ.17 ವರ್ಷಗಳ ಕಾಲ ರಾಜಶೇಖರ ಮೂರ್ತಿಯವರ ಶಿಷ್ಯನಾಗಿ ಕೆಲಸ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಕಾರ್ಯಕರ್ತರನ್ನು ಬೆನ್ನಿಗೆ ಕಟ್ಟಿಕೊಂಡು ಬೆಳೆಸಿದ್ದೇನೆ. ಬದುಕಿನ ದಾರಿಯಲ್ಲಿ ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ಕೆಡಕು ಬಯಸಿಲ್ಲ, ಸುಸಂಸ್ಕೃತ ಕುಟುಂಬದಿಂದ ಬಂದ ನನಗೆ ನಮ್ಮ ತಂದೆ ತಾಯಿ ಸರಿದಾರಿ ಕಲಿಸಿಕೊಟ್ಟಿದ್ಧಾರೆ. ಧರ್ಮದ ದಾರಿಯಲ್ಲಿ ನಡೆಯುತ್ತೇನೆ ಎಂದರು.


ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಕಾಂಗ್ರೆಸ್ -ಜೆಡಿಎಸ್ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿದ್ದು, ಗಟ್ಟಿಯಾಗಿದೆ ಎಂಬುದನ್ನು ಈ ಬಾರಿ ತೋರಿಸಿಕೊಡಬೇಕಿದೆ. ನಾವಿಬ್ಬರೂ ಸೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.


ಬಿಜೆಪಿ ಮುಖಂಡ ಡಾ.ರೇವಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ಬಿಜೆಪಿಯ ಪ್ರಭಾರಿ ಎನ್.ವಿ.ಫಣೀಶ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಚಿನ್ನಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಎನ್.ಎಂ.ರಾಮಚಂದ್ರ, ಹೆಳವರಹುಂಡಿ ಸಿದ್ದಪ್ಪ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಮ್ರಾಟ್ ಸುಂದರೇಶನ್, ಟಿಎಪಿಎಂಎಸ್ ಅಧ್ಯಕ್ಷ ಸುಬ್ರಹ್ಮಣ್ಯ,ಸಂಚಾಲಕ ಕರೋಹಟ್ಟಿ ಬಸವರಾಜು, ಬನ್ನೂರು ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೆಗೌಡ,ಬಿ.ಎನ್.ಸುರೇಶ್, ಜೈಪಾಲ್ ಭರಣಿ, ಕಾರ್ ಮಲ್ಲಪ್ಪ, ಬೆನಕನಹಳ್ಳಿ ಪ್ರಭುಸ್ವಾಮಿ, ಪ್ರಭಾಕರ್, ಅತ್ತಹಳ್ಳಿ ಕುಮಾರಸ್ವಾಮಿ, ರವಿ, ಅಡುಗೆ ಕುಮಾರ್, ದಯಾನಂದ್ ಪಟೇಲ್, ವೈ.ಎಸ್. ರಾಮಸ್ವಾಮಿ, ಕೊಡಗಳ್ಳಿ ಜವರಪ್ಪ, ಕರೋಹಟ್ಟಿ ಮಹದೇವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net