ವೈಭವದ ಶ್ರೀ ನರಸಿಂಹಸ್ವಾಮಿ ರಥೋತ್ಸವ

oppo_2
ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
Published on

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಶ್ರೀ ನರಸಿಂಹಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವಕ್ಕೆ ಹಣ್ಣು ದವನ ಎಸೆದು, ರಥ ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು.

ರಥೋತ್ಸವದ ಅಂಗವಾಗಿ ಶ್ರೀ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಬಿಸಿಲನ್ನೂ ಲೆಕ್ಕಿಸದೆ ದೇವರ ದರ್ಶನ ಪಡೆದರು. ಶ್ರೀ ನರಸಿಂಹಸ್ವಾಮಿ ಸೇವಾ ಸಂಘದ ಹಾಗೂ ಇನ್ನಿತರ ಸಂಘ, ಸಂಸ್ಥೆಗಳ ವತಿಯಿಂದ ಸಹಸ್ರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಮಜ್ಜಿಗೆ ಪಾನಕ ವಿತರಣೆ: ರಥೋತ್ಸವದ ಅಂಗವಾಗಿ ವಿವಿಧ ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಹೆಸರು ಬೆಳೆ ಹಾಗೂ ಪ್ರಸಾದ ವಿತರಣೆ ಮಾಡಿದರು.

ಪ್ರತಿಯೊಬ್ಬರಿಗೂ ಒಳ್ಳೆಯದಾಗಲಿ: ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಂ.ಉದಯ್, ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಶ್ರೀ ನರಸಿಂಹಸ್ವಾಮಿ ದೇವರು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ. ಉತ್ತಮವಾಗಿ ಮಳೆ ಬಂದು ರೈತಾಪಿ ವರ್ಗಕ್ಕೆ ಖುಷಿ ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ನರಸಿಂಹಸ್ವಾಮಿ ದೇಗುಲದ ಸಮಗ್ರ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ರಥೋತ್ಸವದ ನಂತರ ನರಸಿಂಹಸ್ವಾಮಿ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಮಾಜ ಸೇವಕಿ ವಿನುತಾ ಕೆ.ಎಂ.ಉದಯ್, ತಹಸೀಲ್ದಾರ್ ಡಾ.ಸ್ಮಿತಾರಾಮು, ಅರ್ಚಕ ನಾರಾಯಣ್, ಪಾರುಪತ್ತೇಗಾರ್ ಕೆ.ಆರ್.ಮಂಜುನಾಥ್, ಪುರಸಭಾ ಸದಸ್ಯೆ ಸರ್ವಮಂಗಳಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net