ವಿಜೃಂಭಣೆಯ ಶನೇಶ್ವರ ಸ್ವಾಮಿ ಜಯಂತ್ಯುತ್ಸವ

ವಿಜೃಂಭಣೆಯ ಶನೇಶ್ವರ ಸ್ವಾಮಿ ಜಯಂತ್ಯುತ್ಸವ
Published on

ಹಲಗೂರು: ಸಮೀಪದ ಗುಂಡಾಪುರ ಗೇಟ್ ಬಳಿ ಇರುವ ಶ್ರೀ ಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ಶನೇಶ್ವರ ಸ್ವಾಮಿ ಜಯಂತ್ಯುತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಶನಿವಾರ ಮಧ್ಯಾಹ್ನ ದೇವಾಲಯದ ಕಲ್ಲಿನ ಏಳು ದ್ವಾರಗಳ ಸ್ಥಾಪನೆ ಪೂಜಾ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಸ್ವಾಮಿಯ ಜಯಂತ್ಯುತ್ಸವ, ಶ್ರೀಬಸಪ್ಪನವರ ಪಾದಪೂಜೆ, ಮಹಾ ಮಂಗಳಾರತಿ ನಡೆದ ನಂತರ ಅನ್ನ ಸಂತರ್ಪಣೆ ನೆರವೇರಿತು.

ಅರ್ಚಕ ಹೇಮಂತ್ ಕುಮಾರ್, ಮಡಿವಾಳ ಹಾಸಿದ ಮಡಿಯ ಮೇಲೆ ನಡೆದು ಹೋಗಿ ದೇವಸ್ಥಾನದ ಹತ್ತಿರ ಇರುವ ಅರಳಿ ಮರ ಬೇವಿನ ಮರಕ್ಕೆಪೂಜೆ ಸಲ್ಲಿಸಿ ನಂತರ ದೇವಸ್ಥಾನದ ಮುಖ್ಯದ್ವಾರಗಳಿಗೆ ಪೂಜೆ ಸಲ್ಲಿಸಿದರು. ಭಕ್ತರು ಇಷ್ಟಾರ್ಥ ಈಡೇರಿಸುವಂತೆ ಎಳ್ಳುಬತ್ತಿ ಹಚ್ಚಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಬಿ.ಸೋಮಶೇಖರ್ ಮಾತನಾಡಿ, ದೇವಸ್ಥಾನದಲ್ಲಿ ಶನಿಮಹಾತ್ಮ ದೇವರಿಗೆ ಜನ್ಮ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿದ್ದಾರೆ. ನಾನು ಬಹಳ ವರ್ಷಗಳಿಂದ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಈ ದೇವಸ್ಥಾನವು ಮುಖ್ಯರಸ್ತೆಯಲ್ಲಿ ಇರುವುದರಿಂದ ಇನ್ನು ಬಹಳ ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಗ್ರಾಮದವರು ಸೇರಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಕೂಡ ತಾವು ನೆರವು ನೀಡಿದರೆ ಈ ದೇವಸ್ಥಾನ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಮಾಜಿ ಶಾಸಕ ಡಾಕ್ಟರ್ ಕೆ ಅನ್ನದಾನಿ ಮಾತನಾಡಿ, ಶನೇಶ್ವರ ಎಂದರೆ ಭಕ್ತರಿಗೆ ಸ್ವಲ್ಪ ಭಯ ಇರುತ್ತದೆ. ಯಾವ ದೇವರಿಗೂ ಭಯಪಡದಿದ್ದರೂ ಶನೇಶ್ವರ ಸ್ವಾಮಿಗೆ ಭಯಪಡುತ್ತಾರೆ. ಭಯ ಇರಲಿ ಭಯ ಇಲ್ಲದೆ ಇರಲಿ ದೇವರನ್ನು ಒಂದೇ ರೂಪದಲ್ಲಿ ನೋಡುತ್ತೇವೆ ಎಂದರು.

ದೇವಸ್ಥಾನದ ಮೇಲ್ವಿಚಾರಕ ರಾಜು ಮಾತನಾಡಿ, ದೇವಾಲಯ ಅಭಿವೃದ್ಧಿ ಹೊಂದಲು ಅಪಾರ ಭಕ್ತರು ನೀಡಿದ ಕಾಣಿಕೆ ಹಾಗೂ ದೇವರ ಕೃಪೆಯೇ ಕಾರಣವಾಗಿದೆ ಎಂದರು.

ಎಚ್.ಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುತ್ತಮ್ಮ, ಹಲಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾಮಹದೇವು,ದಳವಾಯಿ ಕೋಡಿಹಳ್ಳಿ ಗ್ರಾಮದ ಮುಖಂಡ ತಮ್ಮಣ್ಣ, ಮಾದೇಗೌಡ, ಬಾಲ ಶನಿ ಮಹಾತ್ಮ ಅರ್ಚಕ ಹೇಮಂತ್ ಕುಮಾರ್, ರಾಜು, ನಾಗರಾಜು, ಬಸವರಾಜು, ಪುಟ್ಟಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net