ವಿಜೃಂಭಣೆಯ ಹಸಿರು ಬಂಡಿ ಉತ್ಸವ

23krp-01
Published on

ಕೆ.ಆರ್.ಪೇಟೆ: ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಗ್ರಾಮ ರಕ್ಷಕ, ಶಕ್ತಿ ದೇವರಾದ ಶ್ರೀ ಮುತ್ತುರಾಯಸ್ವಾಮಿ ಪಲ್ಲಕ್ಕಿ ರಥೋತ್ಸವ, ಜಾತ್ರಾ ಮಹೋತ್ಸವ ಹಾಗೂ ಹಸಿರು ಬಂಡಿ ಉತ್ಸವ ಸಂಭ್ರಮ ಸಡಗರದಿಂದ ಭಾನುವಾರ ನಡೆಯಿತು.

ಪಟ್ಟಣದ ಮುತ್ತುರಾಯಸ್ವಾಮಿ ದೇವಾಲಯದ ಆವರಣದಿಂದ ಆರಂಭವಾದ ಪಲ್ಲಕ್ಕಿ ರಥೋತ್ಸವ ಹಳೇ ಹೇಮಗಿರಿ ರಸ್ತೆ, ಅಗ್ರಹಾರ ಬಡಾವಣೆ, ಈಶ್ವರ ದೇವಾಲಯ, ಗಣಪತಿ ದೇವಾಲಯ ಮಾರ್ಗವಾಗಿ, ಮುಕ್ಕಟ್ಟೆ ಚೌಕ ಹಾಗೂ ದುರ್ಗಾಭವನ್ ವೃತ್ತದ ಮೂಲಕ ಸಾಗಿ ಗ್ರಾಮ ದೇವತೆ ದೊಡ್ಡಕೇರಮ್ಮ ದೇವಾಲಯದ ಮಾರ್ಗದಿಂದ ಬಂದು ಸ್ವಸ್ಥಾನ ತಲುಪಿತು.

ಮೂರು ದಿನ ನಡೆಯುವ ಮುತ್ತುರಾಯಸ್ವಾಮಿ ದೇವರ ಹಬ್ಬದ ಅಂಗವಾಗಿ ಇಡೀ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೂಲಕ ಬಂಡಿ ಉತ್ಸವ, ಮುತ್ತುರಾಯಸ್ವಾಮಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

ಪಟ್ಟಣವೇ ತಳಿರು ತೋರಣಗಳಿಂದ, ವಿದ್ಯುತ್ ದೀಪಗಳಿಂದ ಕಂಗೊಳಿಸುತಿತ್ತು. ಮನೆಯ ಮುಂದೆ ಹಾಗೂ ದೇವಾಲಯದ ಆವರಣದಲ್ಲಿ ಬಗೆಬಗೆಯ ಬಣ್ಣದ ರಂಗೋಲಿ ಹಾಕಿದ್ದರು. ಬಾಯಿ ಬೀಗ ಹಾಕಿಸಿಕೊಳ್ಳುವುದರ ಮೂಲಕ ಭಕ್ತರು ಹರಕೆ ತೀರಿಸಿದರು.

ಶಾಸಕ ಎಚ್.ಟಿ.ಮಂಜು, ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ್, ಮನ್‌ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಡಾಲು ರವಿ ಇತರರರು ಭಾಗಿಯಾಗಿದ್ದರು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಉಚಿತವಾಗಿ ನೀರು, ಮಜ್ಜಿಗೆ, ಪಾನಕ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net