ವಿಜೃಂಭಣೆಯ ಬೆಳ್ಳಾರಿಕ್ಕಮ್ಮ ಉತ್ಸವ

07sunti01 (1)
Published on

ಸುಂಟಿಕೊಪ್ಪ: ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತರ ಸಮುಖದಲ್ಲಿ ಶೃದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.

ಸೋಮವಾರ ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ದೇವಾಲಯದ ವೃತದಲ್ಲಿ ತಂಗಿದ್ದರು.

ವಿಶೇಷ ಆಚರಣೆಯಲ್ಲಿ ತೊಡಗಿಸಿಕೊಳ್ಳುವ ಗ್ರಾಮಗಳ ಪುರುಷರು ದೇವಾಲಯದ ಆವರಣದಲ್ಲಿ ರಾತ್ರಿಯ ವೇಳೆ ತಂಗುವ ಮೂಲಕ ದೇವಾಲಯದಲ್ಲಿ ಚೌರಿಕುಣಿತ ನಡೆಸುತ್ತ ದೇವಿಗೆ ಪೂಜೆ ಅರ್ಪಿಸುತ್ತಾರೆ.

ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆ ತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರಾದಾಯಿಕ ಕೊಡವರ ಉಡುಪು ಕುಪ್ಯ್ಪಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸಿದರು. ಬಳಿಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ ಈಡುಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡು ನಂತರ ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.

ದಿನದ ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ವೆಂಕಟರಮಣ ಭಟ್ ನೆರವೇರಿಸಿದರು.

ಸುತ್ತ ಮುತ್ತಲ್ಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net