

* ಮನೆಯಿಂದ ಹೊರ ಬರಲು ಭಯ ಪಡುವ ಸನ್ನಿವೇಶ
* ಕಿರಿಕಿರಿಗೆ ಮುಕ್ತಿ ನೀಡಲು ನಗರಸಭೆ ಮುಂದಾಗಲಿ
ರಾಮನಗರ
ರೇಷ್ಮೆ ನಗರಿ ರಾಮನಗರದಲ್ಲಿ ಈಗ ಸಿಂಬಳದ ಹುಳುಗಳ ಕಾಟ. ಮನೆ ಮನೆಗಳಿಗೆ ಲಗ್ಗೆ ಇಡುತ್ತಿರುವ ಸಿಂಬಳದ ಹುಳುಗಳು ಸಾರ್ವಜನಿಕರ ನಿದ್ದೆಗೆಡಿಸಿವೆ.
ಹೌದು.. ಭೂಮಿಯಲ್ಲಿ ಶೀತ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಸಕ್ರಿಯವಾಗುವ ಸಿಂಬಳದ ಹುಳು, ಕೃಷಿ ಭೂಮಿಯಲ್ಲಿ ಸಾಮಾನ್ಯವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಜನ ವಸತಿ ಪ್ರದೇಶಕ್ಕೂ ಪ್ರವೇಶ ಪಡೆದುಕೊಂಡಿದ್ದು, ಬಸವನ ಹುಳುವಿನ ರೀತಿ ಕಾಣುವ ಈ ಹುಳುಗಳ ಉಪಟಳ ಸಾರ್ವಜನಿಕರನ್ನು ಕಂಗಾಲಾಗಿಸಿದೆ.
ಎಲ್ಲೆಂದರಲ್ಲಿ ಸಿಂಬಳ:
ನಗರದ ಬಹುತೇಕ ಜನವಸತಿ ಬಡಾವಣೆಗಳಲ್ಲಿ ಸಿಂಬಳದ ಹುಳುಗಳ ಕಾಟ ಹೆಚ್ಚಿದೆ. ಅದರಲ್ಲೂ ಖಾಲಿ ನಿವೇಶನ ಮತ್ತು ಗಿಡ ಗಂಟೆಗಳು ಬೆಳದಿರುವ ಅಕ್ಕ ಪಕ್ಕದ ಮನೆಗಳಿಗೆ ಈ ಹುಳುಗಳು ಲಗ್ಗೆ ಇಡುತ್ತಿವೆ. ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿಯೇ ನುಗ್ಗುವ ಈ ಹುಳುಗಳು ಸಂಚರಿಸುವ ಹಾದಿಯಲ್ಲಿ ಸಿಂಬಳದ ಮಾದರಿಯ ಅಂಟನ್ನು ಬಿಟ್ಟು ಹೋಗುವುದರಿಂದ ಮನೆಗಳಲ್ಲಿ ನಡೆದಾಡಲು ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ಹೊದಿಕೆ, ಆಹಾರ ಧಾನ್ಯಗಳಿಗೂ ನುಗ್ಗುವ ಇವುಗಳನ್ನು ನೋಡುತ್ತಿದ್ದಂತೆ ಜನರು ಭಯ ಭೀತಿಗೊಳ್ಳುವಂತೆ ಆಗುತ್ತಿದೆ. ಸಣ್ಣಪುಟ್ಟ ಮಕ್ಕಳಂತೂ ಮನೆಯಿಂದ ಹೊರ ಬರಲು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ.
ಏನೂ ಮಾಡಲು ತಿಳಿಯುತ್ತಿಲ್ಲ:
ನೋಡಲು ಬಸವನ ಹುಳುಗಳಂತೆ ಕಂಡರೂ ಹಾಗೂ ಇವು ಅಪಾಯವನ್ನು ತರುವುದಿಲ್ಲವಾದರೂ ಇದರ ಅಂಟು ಅಸಹ್ಯ ಹುಟ್ಟಿಸುತ್ತಿದೆ. ಅಲ್ಲದೆ, ಇವುಗಳ ನಿಯಂತ್ರಣ ಸಹ ಸಾರ್ವಜನಿಕರಿಗೆ ತಿಳಿಯದ ಕಾರಣ ಕೆಲವು ಬಾರಿ ಇವುಗಳನ್ನು ಸಾಯಿಸುವ ಪ್ರಯತ್ನ ಲ ನೀಡದೇ ಅಂಟನ್ನು ಮೈಗೆ ಅಂಟಿಸಿಕೊಂಡು ಬಂದ ಉದಾಹರಣೆಗಳು ಹೆಚ್ಚಿವೆ. ಕೆಲವೊಮ್ಮೆ ಸಾಕು ನಾಯಿಗಳು ಇವುಗಳನ್ನು ತಿನ್ನಲು ಹೋಗಿ ತೊಂದರೆಗೆ ಒಳಗಾಗಿದ್ದೂ ಉಂಟು ಎನ್ನುತ್ತಿದ್ದಾರೆ ಸ್ಥಳಿಯರು.
ಮನೆಯಲ್ಲಿಯೇ ಮದ್ದು ಮಾಡಿಕೊಳ್ಳಿ
ಗ್ರಾಮೀಣ ಭಾಗದಲ್ಲಿ ಸಿಂಬಳದ ಹುಳುವಿನ ಕಾಟ ಹೆಚ್ಚಿದೆ. ಬೇಸಿಗೆಯಲ್ಲಿ ಭೂಮಿ ಸೇರುವ ಈ ಹುಳುಗಳು ಮಳೆಗಾಲ ಆರಂಭಗೊಂಡು ಭೂಮಿಯಲ್ಲಿ ತೇವಾಂಶ ಹೆಚ್ಚುತ್ತಿದ್ದಂತೆ ಜಮೀನುಗಳಿಗೆ ಲಗ್ಗೆ ಇಡುತ್ತವೆ. ಇವುಗಳನ್ನು ನಿಯಂತ್ರಿಸಲು ರೈತರು ಉಪಾಯವನ್ನು ಕಂಡುಕೊಂಡಿದ್ದಾರೆ. ಅಡುಗೆ ಉಪು$್ಪ ಇಲ್ಲವೇ ಸುಣ್ಣದ ನೀರನ್ನು ಇವುಗಳ ಮೇಲೆ ಸಿಂಪಡಿಸಿದರೆ ಇಲ್ಲವೇ, ಅಂತಹ ನೀರಿನಲ್ಲಿ ಇವುಗಳನ್ನು ಮುಳುಗಿಸಿದರೆ ಸಾಯುತ್ತವೆ. ಇದೇ ತಂತ್ರವನ್ನು ನಗರ ವಾಸಿಗಳು ಅಳವಡಿಸಿಕೊಂಡರೆ ಮನೆ ಒಳಗೆ ಸಿಂಬಳದ ಹುಳು ಬರುವುದನ್ನು ತಕ್ಕಮಟ್ಟಿಗೆ ತಡೆಯಬಹುದು.
ಇದರ ಜತೆಗೆ ಮನೆಯ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಜತೆಗೆ ಸುಣ್ಣದ ನೀರನ್ನು ಭೂಮಿಗೆ ಸಿಂಪಡಣೆ ಮಾಡಿದರೆ ಹುಳುಗಳನ್ನು ನಿಯಂತ್ರಿಸಬಹುದಾಗಿದೆ.
ನಗರಸಭೆ ಕ್ರಮವಹಿಸಲಿ
ನಗರ ಪ್ರದೇಶದಲ್ಲಿ ಸಿಂಬಳದ ಹುಳುವಿನ ಕಾಟ ಹೆಚ್ಚಿರುವ ಕಾರಣ ಖಾಲಿ ನಿವೇಶನಗಳು ಮತ್ತು ಹೆಚ್ಚು ನೀರು ನಿಲ್ಲುವ ಪ್ರದೇಶದಲ್ಲಿ ಹುಳುಗಳ ಉತ್ಪತ್ತಿಯೂ ಹೆಚ್ಚುವುದರಿಂದ ಇಂತಹ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಮತ್ತು ಪ್ರಸ್ತುತ ರಾಮನಗರದ ಐಜೂರು, ಕೆಂಪೇಗೌಡ ವೃತ್ತ, ಮಂಜುನಾಥ ಬಡಾವಣೆಗಳ ಸುತ್ತ ಕೃಷಿ ಮತ್ತು ತೋಟಗಾರಿಕೆ ಇಲಾಖೆ ನೆರವಿನೊಂದಿಗೆ ಹುಳುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ.
ಬಸವನ ಹುಳುವಿನ ರೀತಿ ಇರುವ ಈ ಹುಳುಗಳು ಮನೆಯ ಎಲ್ಲ ಭಾಗದಲ್ಲಿ ಸಂಚರಿಸಿ, ಅಂಟನ್ನು ಹರಡುತ್ತಿವೆ. ಇದು ತುಂಬಾ ತೊಂದರೆಯನ್ನು ನೀಡುತ್ತಿದ್ದು, ಸ್ಥಳಿಯ ಆಡಳಿತ ಕೂಡಲೇ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು.
> ಸಂತೋಷ್, ಕೆಂಪೇಗೌಡ ವೃತ್ತ ರಾಮನಗರ
ಹುಳುವಿನ ಕಾಟದ ಬಗ್ಗೆ ನಗರಸಭೆಗೆ ಯಾವುದೇ ದೂರು ಬಂದಿಲ್ಲ. ಈ ಸಂಬಂಧ ಕ್ರಮವಹಿಸಲು ಸೂಚನೆ ನೀಡಲಾಗುವುದು.
> ಡಾ.ಜಯಣ್ಣ, ಆಯುಕ್ತರು, ರಾಮನಗರ ನಗರಸಭೆ