ವಿಷಯುಕ್ತವಾಗಿದೆ ತಿನ್ನುವ ಆಹಾರ

03 HANUR 1
ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರ ಜಮೀನಿನಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ರಾಗಿಯನ್ನು ಬಿತ್ತನೆ ಮಾಡುವುದರ ಮೂಲಕ ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿದರು. ಸಚಿವ ಕೆ.ವೆಂಕಟೇಶ್, ಎಂ.ಆರ್.ಮಂಜುನಾಥ್, ಆರ್.ನರೇಂದ್ರ ಸಿ.ಟಿ ಶಿಲಾನಾಗ್ ಇತರರು ಇದ್ದರು.
Published on

ಹನೂರು: ಇತ್ತೀಚಿನ ದಿನಗಳಲ್ಲಿ ತಿನ್ನುವ ಆಹಾರವು ವಿಷಯುಕ್ತವಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಾವಯವ ಹಾಗೂ ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರ ಜಮೀನಿನಲ್ಲಿ ಗುರುವಾರ ರಾಗಿಯನ್ನು ಬಿತ್ತನೆ ಮಾಡುವುದರ ಮೂಲಕ ಬೀಜ ಬಿತ್ತನೆ ಅಭಿಯಾನಕ್ಕೆ ಚಾಲನೆ ನೀಡಿ, ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರಮಜೀವಿಗಳಾದ ರೈತರು ಕಷ್ಟದ ನಡುವೆಯೂ ಕೃಷಿ ಮಾಡುತ್ತಿದ್ದಾರೆ. ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೃಷಿಯಲ್ಲಿ ತೊಡಗಿದ್ದಾರೆ. ಈತನ್ಮಧ್ಯೆ ದಯಾನಂದ್ ಅವರು ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದು, ಸಾವಯವ ಹಾಗೂ ಸಮಗ್ರ ಕೃಷಿಯನ್ನು ಅವಲಂಬಿಸಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಗತಿಪರ ರೈತರು, ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಂಪರ್ಕ ಪಡೆದುಕೊಂಡು ಇರುವ ಜಮೀನಿನಲ್ಲೇ ವಿವಿಧ ಬೆಳೆಗಳು, ತರಕಾರಿಯನ್ನು ಬೆಳೆಯುವುದರ ಜತೆಗೆ ಕುರಿ, ಕೋಳಿ ಹಾಗೂ ಮೇಕೆ ಸಾಕಣೆ ಮಾಡುವುದರ ಮೂಲಕ ಸಮಗ್ರ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಆಧುನಿಕ ಪದ್ಧತಿ ಅನುಸರಿಸಬೇಕು. ಕೃಷಿಯ ಬಗ್ಗೆ ಇನ್ನಷ್ಟು ಜ್ಞಾನ ಹೊಂದಬೇಕು. ಜತೆಗೆ ನಿರಂತರವಾಗಿ ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರಬೇಕು. ಇದರಿಂದ ಎರಡು ವರ್ಷದಲ್ಲೇ ಕೃಷಿಯಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ಆದಾಯ ಗಳಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು. ಇನ್ನು ಕಾಂಗ್ರೆಸ್ ಸರ್ಕಾರ ರೈತರಿಗೆ ಹಲವು ಸವಲತ್ತುಗಳನ್ನು ನೀಡುವುದರ ಮೂಲಕ ಉತ್ತೇಜನ ನೀಡುತ್ತಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಸಹಕಾರ: ರೇಷ್ಮೆ ಮತ್ತು ಕೃಷಿ ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ರೈತರು ಕೃಷಿಯಲ್ಲಿ ಕಷ್ಟ ಪಡಬೇಕು. ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿರಬೇಕು. ಇದರಿಂದ ಉತ್ತಮ ಫಲ ದೊರೆಯುತ್ತದೆ. ಸರ್ಕಾರ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಕೃಷಿಗಾಗಿ ಸಬ್ಸಿಡಿ ನಿಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಬೇಕು. ಇನ್ನು ಮ.ಬೆಟ್ಟದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 3.5 ಸಾವಿರ ಕೋಟಿ ರೂ ಅನುದಾನ ಮಂಜೂರಾಗಿದ್ದು, ಹಣಕಾಸು ಹಂತದಲ್ಲಿದೆ. ಬಳಿಕ ಕಾಮಗಾರಿ ಆರಂಭಿಸಲಾಗುವುದು. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ರೈತರಿಗೆ ಉತ್ತೇಜನ ನೀಡಬೇಕು: ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಹನೂರು ಭಾಗದಲ್ಲಿ ಹೆಚ್ಚು ರೈತಾಪಿ ವರ್ಗವಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಜತೆಗೆ ಹೈನುಗಾರಿಕೆಯನ್ನು ಅವಲಂಬಿಸಿದ್ದು, ಪ್ರತಿದಿನ ಸುಮಾರು 90 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರೈತರಿಗೆ ಉತ್ತೇಜನ ನೀಡುವುದು ಅವಶ್ಯಕವಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಸಮರ್ಪಕ ನೀರಾವರಿ ಸೌಕರ್ಯ ಒದಗಿಸಬೇಕಿದೆ. ರಾಮನಗುಡ್ಡೆ, ಹುಬ್ಬೆಹುಣಸೆ ಜಲಾಶಯಕ್ಕೆ ನೀರು ತುಂಬಿಸುವ ಕೆಲಸ ಆಗಬೇಕಿದ್ದು, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ರೈತರೊಂದಿಗೆ ಸಂವಾದ: ಈ ವೇಳೆ ರೈತರು ಮಾತನಾಡಿ, ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಅತಿಕ್ರಮಿಸಿರುವ ರಸ್ತೆಗಳನ್ನು ತೆರವುಗೊಳಿಸಬೇಕು. ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಬೇಕು. ಅಂಗವಿಕಲ ರೈತರಿಗೆ ವಿಶೇಷ ಅನುದಾನ ನೀಡಬೇಕು ಎಂದರು. ಇದಕ್ಕೆ ಕೃಷಿ ಸಚಿವರು ಅಗತ್ಯ ಭರವಸೆ ನೀಡಿದರು.

ಇದೇ ವೇಳೆ ಮಾವು ತಿನ್ನುವ ಸ್ಪರ್ಧೆಯಲ್ಲಿ ವಿಜೇತರಾದ ಮಣಗಳ್ಳಿ ಹಾಗೂ ಚಿಂಚಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಫಲಾನುಭವಿಗಳಿಗೆ ಕೃಷಿ ಪರಿಕರಗಳನ್ನು ವಿತರಿಸಲಾಯಿತು.

ಬಳಿಕ ಸಚಿವರು ಅಧಿಕಾರಿಗಳೊಂದಿಗೆ ಜಮೀನಿನ ಸುತ್ತ ತೆರಳಿ 45 ಎಕರೆಯಲ್ಲಿ ಬೆಳೆದಿದ್ದ ತೇಗ, ಹೊನ್ನೆ, ಬೀಟೆ, ಮಹಾಗನಿ, ಶ್ರೀಗಂಧ, ಇನ್ನಿತರ ವಿವಿಧ ಜಾತಿಯ ಮರಗಳು, ಮಾವು, ನೇರಳೆ, ಹಲಸು, ಸೀತಾಫಲ, ವಾಟರ್ ಆ್ಯಪಲ್, ಬಟರ್ ಫ್ರೂಟ್ ಹಾಗೂ ಇನ್ನಿತರ ಹಣ್ಣಿನ ಗಿಡಗಳು, ಬಿದಿರು, ಔಷಧೀಯ ಗಿಡಮೂಲಿಕೆಗಳು, ಹೈನುಗಾರಿಕೆ, ಕೃಷಿ ಹೊಂಡ ಹಾಗೂ ನೀರಿನ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾವಿನ ಹಣ್ಣಿ ಸ್ವಾದ ಸವಿದರು.

ಮಾಜಿ ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಪ್ರಗತಿಪರ ರೈತ ದಯಾನಂದ್, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾರೋತ್, ಎಸ್ಪಿ ಡಾ.ಟಿ.ಬಿ ಕವಿತಾ, ಉಪ ವಿಭಾಗಾಧಿಕಾರಿ ಬಿ.ಆರ್. ಮಹೇಶ್, ತಹಸೀಲ್ದಾರ್ ವೈ.ಕೆ ಗುರುಪ್ರಸಾದ್, ತಾಪಂ ಇಒ ಉಮೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್, ಉಪ ನಿರ್ದೇಶಕಿ ಸುಷ್ಮಾ, ಸಹಾಯಕ ನಿರ್ದೇಶಕರಾದ ಕೊಳ್ಳೇಗಾಲದ ರಂಗಸ್ವಾಮಿ, ಚಾ.ನಗರದ ನಿಶಾಂತ್, ಕೃಷಿ ಅಧಿಕಾರಿಗಳಾದ ಮನೋಹರ್, ನಾಗೇಂದ್ರ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net