

ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು: ಬೆಂಗಳೂರಿನ ನೀರಿನ ಬೇಡಿಕೆಯನ್ನು ಕೇವಲ ಕಾವೇರಿ ಸಂಪರ್ಕ ಒಂದರಿಂದಲೇ ಪೂರೈಸುವುದು ಅಸಾಧ್ಯ. ನಗರದಲ್ಲಿರುವ ಹಲವು ಕೆರೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾಗರೀಕರಿಗೆ ಜಲಮೂಲವಾಗಿವೆ. ಅವುಗಳಲ್ಲಿ ವಿದ್ಯಾರಣ್ಯಪುರ ಬಡಾವಣೆಯ ಸುತ್ತಮುತ್ತಲಿನ ಅಂತರ್ಜಲ ವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನರಸೀಪುರ ಕೆರೆಗಳಿಗೆ ರಕ್ತದ ಕೋಡಿ ಹರಿದು ಬರುತ್ತಿರುವುದು ನಾಗರೀಕರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಕೆರೆಗಳು ನಮ್ಮ ಪರಿಸರದ ಪ್ರಮುಖ ಭಾಗ. ಮನುಷ್ಯರ ಅವಶ್ಯಕತೆ ಮಾತ್ರವಲ್ಲದೆ ಪಶು-ಪಕ್ಷಿ. ಪ್ರಾಣಿಗಳ ದಾಹವನ್ನು ತಣಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರಣ್ಯಪುರ ಬಡಾವಣೆಯಲ್ಲಿರುವ ನರಸೀಪುರದ ಎರಡು ಕೆರೆಗಳು ಈ ಭಾಗದ ಜೀವನಾಡಿಗಳೆಂದೇ ಹೇಳಬಹುದು. ಇಂತಹ ಕೆರೆಗಳ ಮುಖಾಂತರವೇ ಹಾದು ಹೋಗುವ ಒಳಚರಂಡಿಯ ಕಾಲುವೆ ಮೂಲಕ ಕೆಂಪು ನೀರು ಹರಿದು ಬರುತ್ತಿರುವದು ಸ್ಥಳೀಯರಿಗೆ ಆತಂಕ ತರಿಸಿದೆ. ವಿಶೇಷವಾಗಿ ಶನಿವಾರ, ಭಾನುವಾರ ಬಂತೆಂದರೆ ಕೆಂಪು ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಹರಿದು ಬರುವ ಕೆಂಪು ನೀರು ಕಾಲುವೆ ಮುಖಾಂತರ ನರಸೀಪುರದ 1ನೇ ಕೆರೆ (ಲೋಟಸ್ ಲೇಕ್) ಮೂಲಕ ಬೃಹತ್ತಾದ 2ನೇ ಕೆರೆಗೂ ಹರಿದು ಬರುತ್ತದೆ. ತ್ಯಾಜ್ಯನೀರು ಹರಿದು ಹೋಗಲು ಪ್ರತ್ಯೇಕ ಕಾಲುವೆ ಹಾಗೂ ಪೈವ್ ವ್ಯವಸ್ಥೆಯನ್ನು ಮಾಡಲಾಗಿದೆಯಾದರೂ ಮಳೆಗಾಲದಲ್ಲಿ ಪೈಪ್‌ನ ದ್ವಾರವನ್ನು ಮುಚ್ಚಿ ಮಳೆನೀರನ್ನು ಕೆರೆಗೆ ಹರಿಸಲಾಗುತ್ತದೆ. ಈ ಕಾಲುವೆಯಲ್ಲಿ ತ್ಯಾಜ್ಯದ ನೀರು ಅಥವಾ ಕೆಂಪು ನೀರು ಓವರ್ ಫ್ಲೋ ಅದಾಗ ನೇರವಾಗಿ ಅದು ಕೆರೆಯನ್ನು ಸೇರುತ್ತದೆ. ಇದರಿಂದ ಸುತ್ತಮುತ್ತಲ ಏರಿಯಾದಲ್ಲಿರುವ ಬೋರ್‌ವೆಲ್‌ಗಳ ಮೇಲೂ ಪರಿಣಾಮ ಉಂಟಾಗುತ್ತಿದ್ದು, ನೀರು ಕೆಟ್ಟ ವಾಸನೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕೆರೆಗಳಿಗೆ ಹರಿದು ಬರುತ್ತಿರುವ ರಕ್ತದ ನೀರಿಗೆ ಪ್ರಾಣಿಬಲಿ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕಾಲುವೆಯು ಎಂ.ಎಸ್.ಪಾಳ್ಯ. ಬೆಟ್ಟಹಳ್ಳಿ ಕಡೆಯಿಂದ ಹರಿದು ಬರುತ್ತಿದ್ದು, ಮುಂದೆ ದೊಡ್ಡಬೊಮ್ಮಸಂದ್ರ ಕೆರೆಗೆ ಹೋಗಿ ಸೇರುತ್ತಿದೆ. ಈ ಪ್ರದೇಶಗಳಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗಿನ ಜಾವದ ವರೆಗೆ ಮಾಂಸ ಮಾರಾಟಕ್ಕಾಗಿ ಪ್ರಾಣಿ ಹತ್ಯೆ ಮಾಡುತ್ತಿದ್ದು, ಪೂರ್ಣ ರಕ್ತ ಬಸಿದ ನಂತರ ಮಾಂಸವನ್ನು ಕೊಂಡೊಯ್ಯುತಿದ್ದಾರೆ. ಇದರಿಂದಾಗಿ ಭಾನುವಾರದ ದಿವಸ ಕೆರೆಗೆ ರಕ್ತಮಿಶ್ರಿತ ನೀರು ಹರಿದು ಬರುತ್ತಿದೆ ಎಂದು ಪ್ರತಿನಿತ್ಯ ವಾಯುವಿಹಾರ ನಡೆಸುವ ನಾಕರೀಕರು ಆರೋಪಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಅವರ ವಾದ.
ನಿರ್ವಹಣೆ ಇಲ್ಲದೆ ನಲುಗುತ್ತಿರುವ ಕೆರೆ
ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರಿಗೆ ಹಲವು ಅನ್ವರ್ಥಕ ನಾಮಗಳಿವೆ. ಗಾರ್ಡನ್ ಸಿಟಿ. ಸಿಲಿಕಾನ್ ಸಿಟಿ, ಜೊತೆಗೆ ಹಿಂದೊಂದು ಕಾಲಕ್ಕೆ ಇದು ಕೆರೆಗಳ ನಗರವು ಆಗಿತ್ತು ಎನ್ನುತ್ತೆ ಇತಿಹಾಸ. ನಗರದ ಜನರ ಅವಶ್ಯಕತೆಯನ್ನು ಪೂರೈಸುವುದಕ್ಕೆ ಸಾಕಷ್ಟು ಕೆರೆಗಳು ಇಲ್ಲಿದ್ದವು. ಆದರೆ ಭೂನುಂಗಣ್ಣರ ದಾಹಕ್ಕೆ ಲೆಕ್ಕವಿಲ್ಲದಷ್ಟು ಕೆರೆಗಳು ಕಣ್ಮರೆಯಾಗಿವೆ. ಇರುವ ಬೆರಳೆಣಿಕೆ ಕೆರೆಗಳು ಕೂಡಾ ಸರಿಯಾದ ನಿರ್ವಹಣೆ ಇಲ್ಲದೆ ಕಾಡುಕೊಂಪೆಯಂತಾಗಿದ್ದರೆ; ಕೆಲವು ಕೆರೆಗಳು ತ್ಯಾಜ್ಯ ನೀರಿನಿಂದ ತುಂಬಿಕೊಂಡಿವೆ.
ವಿದ್ಯಾರಣ್ಯಪುರದ ವಾರ್ಡ್ ನಂ.9ರಲ್ಲಿರುವ ನರಸೀಪುರದ ಎರಡೂ ಕೆರೆಗಳು ವಿಸ್ತೀರ್ಣದಲ್ಲಿ ಬೃಹತ್ತಾಗಿದ್ದು, ಕೆರೆ ಅಭಿವೃದ್ಧಿ ಇಲಾಖೆಯು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಬೃಹತ್ ಕೆರೆಯ ತುಂಬೆಲ್ಲಾ ಗಿಡ-ಗಂಟಿ ಬೆಳೆದಿದ್ದು, ನೀರಿದ್ದರೂ ಸದ್ಬಳಕೆಯಾಗದಂತಹ ಪರಿಸ್ಥಿತಿ ಉಂಟಾಗಿದೆ.
ಸಾಂಕ್ರಾಮಿಕ ರೋಗದ ಆತಂಕ
ನರಸೀಪುರ ಕೆರೆಗಳೆರಡೂ ಸರಿಯಾದ ನಿರ್ವಹಣೆ ಇಲ್ಲದೆ, ಮಳೆನೀರು ಮತ್ತು ತ್ಯಾಜ್ಯ ನೀರು ಎರಡೂ ಒಂದೇ ಕಾಲುವೆಯಲ್ಲಿ ಹರಿದು ಬಂದು ಕೆರೆಯನ್ನು ಸೇರುತ್ತಿರುವುದರಿಂದ ಸುತ್ತಮುತ್ತ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿದ್ದ ಡೆಂಘೆ ಹಾಗೂ ವೈರಲ್ ಫೀವರ್ ಸಂದರ್ಭದಲ್ಲಿ ಸುತ್ತಮುತ್ತಲಿನ ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿಗೆ ಬರುವ ಈ ಕೆರೆಗಳು ಪ್ರತಿ ಚುನಾವಣೆ ಸಂದರ್ಭದಲ್ಲಿ ರಾಜಕೀಯದ ವಿಷಯಗಳಾಗುತ್ತವೆಯೇ ಹೊರತು ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
-ಬಾಲಾಜಿರಾವ್. ಸ್ಥಳೀಯರು
-ಕೃಷ್ಣಪ್ಪ, ಹಿರಿಯ ನಾಗರೀಕರು
-ಕೃಷ್ಣ ಕೆ.ಎಸ್. ನಿವೃತ್ತ ಬಿಇಎಲ್ ಅಧಿಕಾರಿ