

ನಂಜನಗೂಡು: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವರುಣನ ಆರ್ಭಟಕ್ಕೆ ನಾಟಿ ಮಾಡಿದ್ದ ಗದ್ದೆಗಳು ಹಾಗೂ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಗುಂಡ್ಲುಪೇಟೆ ಊಟಿ ಮುಖ್ಯರಸ್ತೆಯ ಬದಿಯಲ್ಲಿದ್ದ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸಹಳ್ಳಿ ಗ್ರಾಮದ ಬಳಿ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರಿಂದ ಕಬಿನಿ ಬಲದಂಡೆ ನಾಲೆಯ 24ನೇ ಗೇಟ್ ಇಂದ ಬರುತ್ತಿರುವ ನೀರು ಮತ್ತು ಮಳೆ ನೀರು ಜತೆಗೂಡಿ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ನೀರು ಹರಿಯುತ್ತಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯು ಜಲಾವೃತವಾಗಿರುವುದರಿಂದ ಗ್ರಾಮಸ್ಥರು ಸಂಚರಿಸಲು ತುಂಬ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.