ಬಸ್ ಸುಸ್ಥಿತಿಯಲ್ಲಿಡುವಂತೆ ರೈತ ಸಂಘ ಮನವಿ

ಬಸ್ ಸುಸ್ಥಿತಿಯಲ್ಲಿಡುವಂತೆ ರೈತ ಸಂಘ ಮನವಿ
Published on

ಹನೂರು: ತಾಲೂಕಿನ ತಮಿಳುನಾಡು ಗಡಿಯಂಚಿನ ಗ್ರಾಮ ಜಲ್ಲಿಪಾಳ್ಯಕ್ಕೆ ಸಂಚರಿಸುತ್ತಿರುವ ಬಸ್‌ಗಳ ಟೈರ್ ಹಾಗೂ ಬ್ಲೇಡ್‌ಸೆಟ್ ಬದಲಾಯಿಸುವುದರ ಮೂಲಕ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವಂತೆ ರೈತ ಸಂಘದ ಪದಾಧಿಕಾರಿಗಳು ಬುಧವಾರ ವಿಭಾಗೀಯ ಸಂಚಾರಿ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಪದಾಧಿಕಾರಿಗಳು ಮನವಿ ಸಲ್ಲಿಸಿ ಮಾತನಾಡಿ, ಜಲ್ಲಿಪಾಳ್ಯ ಗ್ರಾಮವು ಕಾಡಂಚಿನ ಗ್ರಾಮವಾಗಿದ್ದು, ಈ ಮಾರ್ಗದ ಮೂಲಕ ಹತ್ತಾರು ಗ್ರಾಮದ ಜನರು ನಿತ್ಯ ಕೆಲಸ ಕಾರ್ಯಗಳ ನಿಮಿತ್ತ ರಾಮಾಪುರ, ಹನೂರು, ಕೊಳ್ಳೇಗಾಲ ಹಾಗೂ ಇನ್ನಿತರ ಕಡೆಗಳಿಗೆ ತೆರಳುತ್ತಾರೆ. ಹಾಗೆಯೇ ವಿದ್ಯಾರ್ಥಿಗಳು ಕೂಡ ಸಂಚರಿಸುತ್ತಾರೆ. ಕೊಳ್ಳೇಗಾಲ ಘಟಕದಿಂದ ಬಸ್‌ಗಳು ಸಂಚರಿಸುತ್ತಿವೆ. ಆದರೆ, ಈ ಬಸ್‌ಗಳು ಹಳೆಯದಾಗಿದ್ದು, ಆಗಾಗ್ಗೆ ಪಂಕ್ಚರ್ ಹಾಗೂ ಬ್ಲೇಡ್ ತುಂಡಾಗಿ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಹಲವಾರು ಬಾರಿ ಈ ಭಾಗದ ಜನರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಕೊಳ್ಳೇಗಾಲದ ಡಿಪೋ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಹಳೆಯ ಬಸ್ಸಿನಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಇನ್ನಾದರೂ ಈ ಬಗ್ಗೆ ಗಮನಹರಿಸಿ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಇಲ್ಲವೇ ಟೈರ್ ಹಾಗೂ ಅಗತ್ಯ ಬಿಡಿ ಭಾಗಗಳನ್ನು ನೀಡುವಂತೆ ಮನವಿ ಮಾಡಿದರು. ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ಪ್ರತಿಕ್ರಿಯಿಸಿ, ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಪದಾಧಿಕಾರಿಗಳಾದ ಅರ್ಪುದರಾಜ್, ವೆಂಕಟಾಚಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net