ಗದ್ದೆಕೆಂಪಮ್ಮ ದೇವಿಯ ಜಾತ್ರೆ ಸಂಪನ್ನ

jatre
ಹಿರೀಸಾವೆ ಸಮೀಪದ ವಿಘ್ನಸಂತೆ ಗ್ರಾಮದೇವತೆ ಶ್ರೀ ಆದಿಶಕ್ತಿ ಗದ್ದೆಕೆಂಪಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ವೈಭವದಿಂದ ನಡೆಯಿತು.
Published on

ಹಿರೀಸಾವೆ: ಸಮೀಪದ ವಿಘ್ನಸಂತೆ ಗ್ರಾಮದೇವತೆ ಶ್ರೀ ಆದಿಶಕ್ತಿ ಗದ್ದೆಕೆಂಪಮ್ಮ ದೇವಿಯ ಹಬ್ಬ, ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಕಳೆದ ಶುಕ್ರವಾರ ದೇವಿಯ ಸನ್ನಿಧಿಯಲ್ಲಿ ಮಜ್ಜನ ಶಾಸ್ತ್ರ ನೆರವೇರಿತು. ಶನಿವಾರ ದೇಗುಲಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರ ಜಗಮಗಿಸಿತು.

ಭಾನುವಾರ ಮಾರಿಹಬ್ಬ ಹಾಗೂ ದೇವಿಗೆ ಆರತಿ ನೈವೇದ್ಯ ನಡೆಯಿತು. ಸೋಮವಾರ ಗಂಗಾಸ್ಥಾನ ಹಾಗೂ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು. ಶ್ರೀ ಗದ್ದೆಕೆಂಪಮ್ಮ ಹಾಗೂ ದೇವಿಯ ಸಹೋದರಿ ಶ್ರೀ ಬಿದರಕೆರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಒಡವೆ, ವಸ್ತ್ರ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಯಿತು.

ಮಂಗಳವಾರ ಬೆಳಗ್ಗೆ ಶ್ರೀ ಗದ್ದೆಕೆಂಪಮ್ಮ ದೇವಿಯ ಅಡ್ಡಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಧ್ಯಾಹ್ನ ಅಲಂಕೃತಗೊಂಡಿದ್ದ ರಥದ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆಯೇ ಭಕ್ತರು ಹಗ್ಗ ಹಿಡಿದು ರಥವನ್ನು ಎಳೆದರು.

ರಥವು ಸಾಗಿದಂತೆಲ್ಲ ಭಕ್ತರು ಹೂವು, ಬಾಳೆಹಣ್ಣು, ತುಳಸಿ ಹಾಗೂ ದವನಗಳನ್ನು ರಥದ ಮೇಲೆ ಎಸೆದು ಭಕ್ತಿ ಭಾವದಲ್ಲಿ ತೇಲಿದರು. ಈಡುಗಾಯಿ ಒಡೆದು ಹರಕೆ ತೀರಿಸಿದರು. ಬುಧವಾರ ಬೆಳಗ್ಗೆ ದೇವಿಯ ಸನ್ನಿಧಿಯಲ್ಲಿ ಸಿಡಿ ಉತ್ಸವ ಹಾಗೂ ಗಾವು ಕಾರ್ಯಕ್ರಮ ನಡೆಯಿತು. 12 ಗ್ರಾಮಗಳಿಂದ ಒಕ್ಕಲಿನವರು ದೇವಿಗೆ ನೈವೇದ್ಯ ಸಲ್ಲಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರು ಹಣ್ಣು, ಕಾಯಿ ಅರ್ಪಿಸಿ, ಗಂಧ ಕರ್ಪೂರ  ಬೆಳಗಿಸಿದರು. ಸಂಜೆ ಗ್ರಾಮಸ್ಥರು ದೇವಿಯರಿಗೆ ಮಡಿಲಕ್ಕಿ ಅರ್ಪಿಸಿದರು.

ಉತ್ಸವದಲ್ಲಿ ಭೂತರಾಯ ಹಾಗೂ ಕೆಂಚರಾಯ ಸೋಮಗಳ ಕುಣಿತ ನೋಡುಗರ ಗಮನ ಸೆಳೆಯಿತು. ಬುಧವಾರ ಸಂಜೆ ಸುಮಾರಿನಲ್ಲಿ ದೇವಿಯರನ್ನು ಗುಡಿದುಂಬಿಸುವ ಮೂಲಕ ಹಬ್ಬ ಹಾಗೂ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net