

* ಬೃಹತ್ ಕಾರ್ಯಾಚರಣೆಯಲ್ಲಿ ಸ್ವಸ್ಥಾನ ಸೇರಿದ 13 ಗಜಪಡೆ
* ಅರಣ್ಯ ಇಲಾಖೆಯಿಂದ ಪ್ರಥಮ ಬಾರಿಗೆ ಇತಿಹಾಸ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶಗಳಿಗೆ ಲಗ್ಗೆ ಇಟ್ಟು ಉಪಟಳ ನೀಡುತ್ತಿದ್ದ 13 ಆನೆಗಳನ್ನು ಬೃಹತ್ ಕಾರ್ಯಾಚರಣೆ ಮೂಲಕ 13 ಆನೆಗಳನ್ನು ಸ್ವಸ್ಥಾನದತ್ತ ಮುಖ ಮಾಡಿಸಿ ಒಂದೇ ಒಂದು ಆನೆ ತೆಂಗಿನಕಲ್ಲು ಅರಣ್ಯದಲ್ಲಿ ಉಳಿಯದಂತೆ ಇದೇ ಪ್ರಥಮಬಾರಿಗೆ ಅರಣ್ಯ ಇಲಾಖೆ ಇತಿಹಾಸ ನಿರ್ಮಿಸಿದೆ.
ತೆಂಗಿನಕಲ್ಲು ಅರಣ್ಯದತ್ತ ಮುಖ ಮಾಡದಂತೆ ಅಂಕುಶ ಹಾಕಲು ಹೊರಟಿರುವ ಅರಣ್ಯ ಇಲಾಖೆ ಇಷ್ಟು ದಿನಗಳ ಆನೆ ಕಾರ್ಯಾಚರಣೆಯಲ್ಲಿ ಒಂದೇ ಒಂದು ಆನೆಯೂ ತೆಂಗಿನಕಲ್ಲು ಅರಣ್ಯದಲ್ಲಿ ಉಳಿಯದಂತೆ ಮಾಡುವಲ್ಲಿ ಮೊದಲಬಾರಿ ಯಶಸ್ಸು ಕಂಡು ಇತಿಹಾಸ ನಿರ್ಮಿಸಿದೆ.
ಕಾವೇರಿ ವನ್ಯಜೀವಿಧಾಮದಿಂದ ಬರುವ ಆನೆಗಳು ತೆಂಗಿನಕಲ್ಲು ಅರಣ್ಯ ಸೇರಿ ಸುತ್ತಮುತ್ತಲ ಪ್ರದೇಶದಲ್ಲಿ ಉಪಟಳ ನೀಡುತ್ತವೆ. ಒಂದೊಂದು ಬಾರಿ 25ಕ್ಕಿಂತಲೂ ಹೆಚ್ಚು ಆನೆಗಳು ಅರಣ್ಯದಲ್ಲಿರುತ್ತವೆ. ಪ್ರತಿದಿನ ಅರಣ್ಯಕ್ಕೆ ಬಂದ ಆನೆಗಳನ್ನು ಅರಣ್ಯ ಇಲಾಖೆ ಸ್ವ-ಸ್ಥಾನದತ್ತ ಮುಖ ಮಾಡಿಸುವ ಕೆಲಸ ಮಾಡುತ್ತದೆ. ಆದರೂ, ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಕೆಲ ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಯಂ ಆಗಿ ನೆಲೆ ಕಂಡುಕೊಂಡಿವೆ.
ಕಳೆದ ತಿಂಗಳು ಅರಣ್ಯ ಇಲಾಖೆ 23 ಆನೆಗಳನ್ನು ಕಾರ್ಯಾಚರಣೆ ನಡೆಸಿತ್ತು. ಎರಡು ಆನೆಗಳು ಅರಣ್ಯದಲ್ಲೇ ಉಳಿದಿದ್ದವು. ಆದರೆ, ಕಳೆದ ವಾರ ಮತ್ತೆ 11 ಆನೆಗಳು ಅರಣ್ಯ ಸೇರಿದ್ದವು. ಒಟ್ಟು 13 ಆನೆಗಳು ತೆಂಗಿನಕಲ್ಲು ಅರಣ್ಯದಲ್ಲಿ ಬೀಡುಬಿಟ್ಟಿದ್ದವು. ಅವುಗಳ ಕಾರ್ಯಾಚರಣೆಗೆ ಕೈ ಹಾಕಿದ ಅರಣ್ಯ ಇಲಾಖೆ ಸತತ ನಾಲ್ಕೈದು ದಿನಗಳಿಂದ 30ಕ್ಕೂ ಹೆಚ್ಚು ಸಿಬ್ಬಂದಿ ಡ್ರೋನ್ ಕ್ಯಾಮರಾ ಕಾರ್ಯಾಚರಣೆ ಮುಖಾಂತರ 9 ಹಿಂಡಿನ ಒಂದು ಮತ್ತು 4 ಹಿಂಡಿನ ಒಂದು ತಂಡದ ಒಟ್ಟೂ 13 ಆನೆಗಳನ್ನು ಶನಿವಾರ ರಾತ್ರಿ ನರೀಕಲ್ಲುಗುಡ್ಡ, ಕಬ್ಬಾಳು ಮುಖಾಂತರ ಕಾವೇರಿ ವನ್ಯಜೀವಿಧಾಮದ ಕಡೆ ಮುಖಮಾಡಿಸಿದೆ.
ಅರಣ್ಯ ಇಲಾಖೆ ಕಳೆದ ತಿಂಗಳು 100ಕ್ಕೂ ಹೆಚ್ಚಿನ ಸಿಬ್ಬಂದಿಯೊಂದಿಗೆ 25ಕ್ಕೂ ಹೆಚ್ಚು ಆನೆಗಳನ್ನು ಕಾರ್ಯಾಚರಣೆ ನಡೆಸಿತ್ತು. ಆದರೆ, ಒಂದು, ಎರಡು, ಮೂರು ಆನೆಗಳ ಹಿಂಡು ಕಾರ್ಯಾಚರಣೆಯಿಂದ ತಪ್ಪಿಸಿಕೊಂಡು ಅರಣ್ಯದಲ್ಲೇ ಉಳಿದಿದ್ದವು. ಮತ್ತೆ ಮತ್ತೆ ಆನೆಗಳು ಲಗ್ಗೆ ಇಟ್ಟಿದ್ದವು. ಕಳೆದ ವಾರದಲ್ಲಿ 13ಕ್ಕೂ ಹೆಚ್ಚು ಆನೆಗಳು ಅರಣ್ಯ ಸೇರಿದ್ದವು. ತೆಂಗಿನಕಲ್ಲು ಅರಣ್ಯದಲ್ಲಿದ್ದ 13 ಆನೆಗಳು ನಾಲ್ಕು ಭಾಗಗಳಲ್ಲಿ ಎರಡೂ, ಮೂರು, ಒಂಟಿ, ಒಂಟಿಯಂತೆ ನೆಲಮಲೆ, ಕಾಡನಕುಪ್ಪೆ, ಅರಳಾಳುಸಂದ್ರ, ಮೆಣಸಿಗನಹಳ್ಳಿ ಭಾಗಗಳಲ್ಲಿ ವಿಂಗಡಣೆಯಾಗಿ ಒಂದು ಕಡೆಯಿಂದ ಕಾರ್ಯಾಚರಣೆ ನಡೆಸಿದರೆ ಮತ್ತೊಂದು ಕಡೆ ಸೇರಿ ಕಲೆದ ಐದಾರು ದಿನಗಳಿಂದ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಸೆಡ್ಡು ಹೊಡೆದಿದ್ದವು.
ತೆಂಗಿನಕಲ್ಲು ಭಾಗದಲ್ಲಿ ಹಸಿರು ರುಚಿ ಕಂಡಿರುವ ಆನೆಗಳು ಸ್ವಸ್ಥಾನಕ್ಕೆ ಹೋದರೂ ಮತ್ತೆ ಮತ್ತೆ ವಾಪಸ್ ಬರುತ್ತವೆ. ಹೀಗೆ ಬರದಂತೆ ತಡೆಯಲು ಕಾವೇರಿ ವನ್ಯಜೀವಿಧಾಮದ ಅಧಿಕಾರಿಗಳು ಮತ್ತು ಸಾತನೂರು ವಲಯದ ಅರಣ್ಯಾಧಿಕಾರಿಗಳು ಆನೆಗಳ ಮೇಲೆ ನಿಗಾ ಇಟ್ಟು ಆನೆಗಳು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಬರದಂತೆ ಎಚ್ಚರವಹಿಸಿದರೆ ಮಾತ್ರ ತೆಂಗಿನಕಲ್ಲು ಭಾಗಕ್ಕೆ ಆನೆಗಳು ಬರದಂತೆ ಮಾಡಬಹುದು. ಇಲ್ಲದಿದ್ದರೆ ಮತ್ತೆ ಬರುತ್ತವೆ ಎನ್ನುತ್ತಾರೆ ಬನ್ನಿಕುಪ್ಪೆ ಗ್ರಾಪಂ ಸದಸ್ಯ ಚಂದ್ರಗಿರಿ.
ತೆಂಗಿನಕಲ್ಲು ಅರಣ್ಯದಲ್ಲಿ ಬೆಳೆದಿರುವ ಬಿದಿರು ಮತ್ತು ಈ ಭಾಗದಲ್ಲಿ ಮಾವು ಫಸಲು ಹೆಚ್ಚಿರುವ ಕಾರಣ ಆನೆಗಳು ಕಾವೇರಿ ವನ್ಯಜೀವಿಧಾಮದಿಂದ ನೇರವಾಗಿ ಬರುತ್ತವೆ. ಹೀಗೆ ಬಂದು ಅರಣ್ಯ ಸೇರಿದ ಆನೆಗಳು ರಾತ್ರಿ ವೇಳೆ ಅಕ್ಕಪಕ್ಕದ ಗ್ರಾಮಗಳ ರೈತರ ತೋಟಗಳಿಗೆ ನುಗ್ಗಿ ಮಾವು ಫಸಲು ನಾಶಮಾಡಿ ಹೋಗುತ್ತವೆ. ಈ ಭಾರಿಮಾವು ಫಸಲು ವಿರಳವಾಗಿದ್ದು ಅಳಿದುಳಿದ ಮಾವು ಫಸಲಾದರೂ ಕೈ ಸೇರುತ್ತದೆ ಎನ್ನುವ ವಿಶ್ವಾಸದಲ್ಲಿರುವ ರೈತರಿಗೆ ಆನೆ ಉಪಟಳ ತಲೆನೋವು ತಂದಿದೆ.
ಕೆಲವೊಂದು ಒಂಟಿ ಆನೆಗಳು ದೊಡ್ಡ ದೊಡ್ಡ ತೆಂಗಿನಮರಗಳನ್ನೇ ನೆಲಕ್ಕುರುಳಿಸುವ ಮೂಲಕ ರೈತರಿಗೆ ಮತ್ತೊಂದು ರೀತಿಯಲ್ಲಿ ಸಂಕಷ್ಟಕ್ಕೆ ದೂಡಿವೆ. ಜತೆಗೆ ಹನಿ ನೀರಾವರಿ ಘಟಕ ಬೋರ್‌ವೆಲ್ ನೀರಿನ ಪರಿಕರ ನಾಶಮಾಡಿವೆ.
ತೆಂಗಿನಕಲ್ಲು ಅರಣ್ಯದ ಸುತ್ತಮುತ್ತಲ ಗ್ರಾಮಗಳ ರೈತರು ಆನೆ ಉಪಟಳದಿಂದ ಹೈರಾಣಾಗಿದ್ದೇವೆ. ಮಾವು ಸೇರಿ ಯಾವ ಫಸಲೂ ಕೈಗೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ತೆಂಗಿನಕಲ್ಲು ಅರಣ್ಯದಲ್ಲಿದ್ದ 13 ಆನೆಗಳನ್ನು ಸ್ವಸ್ಥಾನಕ್ಕೆ ಕಳಿಸಿರುವುದು ಒಂದಷ್ಟು ಸಮಾಧಾನ ತಂದಿದೆ. ಮತ್ತೆ ಆನೆಗಳು ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಬರದಂತೆ ಇಲಾಖೆ ಎಚ್ಚರವಹಿಸಬೇಕು.ಕಾಳುನಾಯ್ಕ, ರೈತಮುಖಂಡ, ದೇವರದೊಡ್ಡಿ.