

ಬೆಳ್ತಂಗಡಿ: ಆತ್ಮೀಯ ಸಂಬಂಧವೇ ಸಹಕಾರಿ ಸಂಸ್ಥೆಗಳ ಅಡಿಪಾಯವಾಗಿದ್ದು, ಅದು ನಮ್ಮ ಜಿಲ್ಲೆಯಲ್ಲಿ ಉತ್ತಮವಾಗಿದೆ. ಇಲ್ಲಿನ ಆರ್ಥಿಕ ಶಿಸ್ತು ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಗುರುವಾರ ಬೆಳ್ತಂಗಡಿಯಲ್ಲಿ ಕೆಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ‘ಆಶಾಕಿರಣ’ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕಡಿಮೆ ಸಂಖ್ಯೆಯಲ್ಲಿರುವ ಕ್ರೈಸ್ತರು ದೊಡ್ಡ ಆರ್ಥಿಕ ಸಂಸ್ಥೆಯನ್ನು ಕಟ್ಟುವ ಮೂಲಕ ಸಮಾಜಕ್ಕೆ ಬಲ ಒದಗಿಸಿದ್ದಾರೆ. ಸಹಕಾರ ಸಂಘಗಳು ಆರ್ಥಿಕ ಸಬಲೀಕರಣದ ಜತೆ ಲಕ್ಷಾಂತರ ಮಂದಿಗೆ ಉದ್ಯೋಗ ಭದ್ರತೆ ನೀಡುತ್ತವೆ. ಕ್ರೈಸ್ತ ಸಮಾಜ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಜತೆ ಸಹಕಾರ ಕ್ಷೇತ್ರಕ್ಕೂ ಬಲ ನೀಡುತ್ತಿರುವುದು ಶ್ಲಾಘನೀಯ. ಕೆಥೊಲಿಕ್ ಕ್ರೆಡಿಟ್ ಸಹಕಾರ ಸಂಘ ಮುಂದಿನ ದಿನಗಳಲ್ಲಿ ಬ್ಯಾಂಕ್ ಆಗಿ ಪರಿವರ್ತನೆ ಹೊಂದಲಿ ಎಂದರು. ಸಂಘದ ಅಧ್ಯಕ್ಷ ಹೆನ್ರಿ ಲೋಗೋ ಅಧ್ಯಕ್ಷತೆ ವಹಿಸಿದರು. ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸಂಘದ ಪ್ರಧಾನ ಕಚೇರಿ ಉದ್ಘಾಟಿಸಿದರು. ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಆಲ್ ಇಂಡಿಯಾ ಕೆಥೋಲಿಕ್ ಯೂನಿಯನ್ ಕರ್ನಾಟಕ ಪ್ರಾಂತ್ಯದ ನಿಕಟಪೂರ್ವ ಅಧ್ಯಕ್ಷ ಸೇವಿಯರ್ ಪಾಲೇಲಿ ಸಂಘದ ನಾನಾ ವಿಭಾಗಗಳನ್ನು ಉದ್ಘಾಟಿಸಿದರು. ಹೋಲಿ ರೆಡೀಮರ್ ಶಾಲೆಯ ಪ್ರಾಂಶುಪಾಲ ಫಾ.ಕ್ಲಿಫರ್ಡ್ ಪಿಂಟೊ, ಸಂಘದ ಉಪಾಧ್ಯಕ್ಷ ಡೆನಿಸ್ ಸಿಕ್ವೇರಾ, ನಿರ್ದೇಶಕರಾದ ಜೇಮ್ಸ್ ಡಿಸೋಜ, ಜೋಸೆಫ್ ಪೀಟರ್ ಸಲ್ಡಾನ, ಹೆರಾಲ್ಡ್ ಪಿಂಟೋ, ಅಲ್ಫೋನ್ಸ್ ರೋಡ್ರಿಗಸ್, ವಿನ್ಸೆಂಟ್ ಪ್ರಕಾಶ್ ಪಿಂಟೊ, ಪ್ರಸಾದ್ ಪಿಂಟೊ, ರಫಾಯಲ್ ವೇಗಸ್, ಪೌಲಿನ್ ರೇಗೊ, ಪ್ಲಾವಿಯಾ ಡಿಸೋಜ, ನಾಮನಿರ್ದೇಶಕರಾದ ವಿನಯ್ ಜಾನ್ಸನ್ ಡಿಸೋಜ, ರಿಯೊ ಮೈಕಲ್ ರೋಡ್ರಿಗಸ್, ಸಿಇಒ ಐವನ್ ಗೊನ್ಸಾಲ್ವಿನ್ ಉಪಸ್ಥಿತರಿದ್ದರು. ಮಡಂತ್ಯಾರು ಕಾಲೇಜಿನ ಉಪನ್ಯಾಸಕ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಕಟ್ಟಡದ ಇಂಜಿನಿಯರ್ ಅಲೆನ್ ಬ್ಯಾಪ್ಟಿಸ್ಟ್ ಡಿಸೋಜ, ಗುತ್ತಿಗೆದಾರ ಜೆರಾಲ್ಡ್ ಮೆಲ್ವಿನ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಶೇ.25 ಡಿವಿಡೆಂಡ್ ವಿತರಣೆ ಸಾಧನೆ ಸಂಘದ ಅಧ್ಯಕ್ಷ ಹೆನ್ರಿ ಲೋಗೊ ಮಾತನಾಡಿ, 1997-98ರಲ್ಲಿ 604 ಸದಸ್ಯರೊಂದಿಗೆ 6 ಲಕ್ಷ ರೂ. ಪಾಲು ಬಂಡವಾಳ ಹೊಂದಿ ಆರಂಭವಾದ ಸಂಸ್ಥೆ ಪ್ರಸ್ತುತ 2700 ಸದಸ್ಯರನ್ನು 93 ಲಕ್ಷ ರೂ. ಬಂಡವಾಳವನ್ನು ಹೊಂದಿದೆ. 95 ಕೋಟಿ ರೂ. ಠೇವಣಿ ಸಂಗ್ರಹದ ಜತೆ 100 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಕಳೆದ ಸಾಲಿನಲ್ಲಿ 3 ಕೋಟಿ ರೂ. ಲಾಭ ಗಳಿಸಿ ಸದಸ್ಯರಿಗೆ 25 ಶೇ. ಡಿವಿಡೆಂಡ್ ನೀಡಲಾಗಿದೆ. ನಾರಾವಿ ಅಳದಂಗಡಿ, ವೇಣೂರುಗಳಲ್ಲಿ ಶಾಖೆಯನ್ನು ಹೊಂದಿದ್ದು ವ್ಯವಹಾರದ ಜತೆ ವಿದ್ಯಾರ್ಥಿವೇತನ, ಧನಸಹಾಯ, ವೈದ್ಯಕೀಯ ನೆರವು, ಧಾರ್ಮಿಕ ಕೆಲಸಗಳಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರು.
ಹೊಸ ವ್ಯವಸ್ಥೆಯಲ್ಲಿ ತನ್ನ ಗ್ರಾಹಕರಿಗೆ, ಸದಸ್ಯರಿಗೆ ಇನ್ನಷ್ಟು ಹೆಚ್ಚಿನ ಆರ್ಥಿಕ ಸಹಕಾರ ನೀಡುವ ಯೋಜನೆ ರೂಪಿಸಿ, ಸೇವೆಯ ಮನೋಭಾವದೊಂದಿಗೆ ಸಾಗಬೇಕು. ಪ್ರಾಮಾಣಿಕ, ಜವಾಬ್ದಾರಿಯ ಕೆಲಸಗಳಿಂದ ಅಭಿವೃದ್ಧಿ ಸಾಧ್ಯ. ಧೈಯರ್ಂ ಸರ್ವತ್ರ ಸಾಧನಂ ಎಂಬಂತೆ ಬಡಬಗ್ಗರಿಗೆ ಸೇವೆ ನೀಡುವ ಛಲವಿರಲಿ. ಇದಕ್ಕೆ ಭಗವಂತನ ಆಶೀರ್ವಾದ ಜನರ ಬೆಂಬಲ ಇರುತ್ತದೆ. ಫಾ.ವಾಲ್ಡರ್ ಡಿಮೆಲ್ಲೋ, ಧರ್ಮಗುರು, ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್