ಕುಡಿಯುವ ನೀರಿನ ತೊಂಬೆ ಶಿಥಿಲ

17 HANUR 2
Published on

ಹನೂರು: ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಪೂರ್ಣ ಶಿಥಿಲಗೊಂಡು ಕುಸಿಯುವ ಹಂತದಲ್ಲಿರುವ ಕುಡಿಯುವ ನೀರಿನ ತೊಂಬೆಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಗಿರಿಜನ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಚಿಕ್ಕ ಮಾಲಾಪುರ ಗ್ರಾಪಂಗೆ ಸೇರಿದ ಗ್ರಾಮದ ಈ ಶಾಲೆಯಲ್ಲಿ ಹಿಂದೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಇದರಿಂದ ತೊಂದರೆಯಾಗಿತ್ತು. ದಶಕದ ಹಿಂದೆ ಜಿಪಂ ವತಿಯಿಂದ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಶಾಲಾ ಆವರಣದಲ್ಲಿ ತೊಂಬೆ ನಿರ್ಮಿಸಲಾಗಿತ್ತು. ಇಲ್ಲಿನ ನೀರನ್ನೇ ವಿದ್ಯಾರ್ಥಿಗಳು ಕುಡಿಯಲು ಹಾಗೂ ಬಿಸಿಯೂಟಕ್ಕೂ ಬಳಕೆ ಮಾಡಲಾಗುತ್ತಿದೆ. ಆದರೆ ಕಳೆದ 2 ವರ್ಷದಿಂದ ತೊಂಬೆ ಬಿರುಕು ಬಿಟ್ಟು ಸಂಪೂರ್ಣ ಶಿಥಿಲಗೊಂಡಿದೆ. ಇದರಿಂದ ನೀರು ಜಿನುಗುತ್ತಿದ್ದು, ಪಾಚಿ ಕಟ್ಟಿದೆ. ಪರಿಣಾಮ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಜತೆಗೆ ತೊಂಬೆ ಶಿಥಿಲಗೊಂಡಿರುವ ಕಾರಣ ಕುಸಿಯುವ ಹಂತದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.


ತೊಂಬೆಯನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸುವಂತೆ ಗ್ರಾಪಂ ಆಡಳಿತಕ್ಕೆ ಗ್ರಾಮಸ್ಥರು ಹಾಗೂ ಇಲ್ಲಿನ ಶಿಕ್ಷಕರು ಮನವಿ ಮಾಡಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮಕ್ಕಳು ಹಾಗೂ ಶಿಕ್ಷಕರು ಭಯದಲ್ಲೇ ಕಾಲ ಕಳೆಯಬೇಕಿದೆ. ಆದ್ದರಿಂದ ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮೊದಲು ತೊಂಬೆಯನ್ನು ತೆರವುಗೊಳಿಸಿ ಹೊಸದು ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಶಾಲೆಯ ಆವರಣದಲ್ಲಿನ ತೊಂಬೆ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಕ್ರಿಯಾಯೋಜನೆ ತಯಾರಿಸಿ ತೊಂಬೆಯನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಅಗತ್ಯ ಕ್ರಮ ವಹಿಸಲಾಗುವುದು.
ಮಹದೇವಪ್ರಭು, ಪಿಡಿಒ, ಚಿಕ್ಕಮಾಲಾಪುರ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net