

ಬಾಗೇಪಲ್ಲಿ : ತಾಲೂಕಿನಲ್ಲಿ ಗುರುಭವನ ನಿರ್ಮಾಣದ ಕನಸು ಎರಡು ದಶಕ ಕಳೆದರೂ ನನಸಾಗದಿರುವುದಕ್ಕೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ ಬೇಸರ ವ್ಯಕ್ತಪಡಿಸಿದರು.
ಗುರುಭವನ ನಿರ್ಮಾಣಕ್ಕೆ ತಾಲೂಕು ಕೇಂದ್ರ ಬಾಗೇಪಲ್ಲಿಯಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಹಶೀಲ್ದಾರ್ ಎನ್.ಮನೀಷಾ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿ ಮಾತನಾಡಿದರು.
ಗುರುಭವನ ನಿರ್ಮಿಸಬೇಕೆಂದು ಎರಡು ದಶಕಗಳಿಂದ ಕನಸು ಕಂಡಿದ್ದ ಬಹುತೇಕ ಶಿಕ್ಷಕರು ಇಂದು ನಿವೃತ್ತಿ ಹೊಂದಿದ್ದಾರೆ. ಮತ್ತೆ ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಆದರೆ, ಭವನ ನಿರ್ಮಾಣಕ್ಕೆ ಜಮೀನು ಗುರುತಿಸುವ ಕೆಲಸವೂ ಆಗಿಲ್ಲ. ಹತ್ತಾರು ವರ್ಷಗಳಿಂದ ಶಿಕ್ಷಕರ ಸಂಘದ ವತಿಯಿಂದ ಭವನ ನಿರ್ಮಾಣಕ್ಕಾಗಿ ಮನವಿ ಸಲ್ಲಿಸುತ್ತಿದ್ದರೂ ಕೆಲಸ ಕಾರ್ಯರೂಪಕ್ಕೆ ಬಂದಿಲ್ಲದಿರುವುದು ಬೇಸರ ತರಿಸಿದೆ ಎಂದರು.
ಪ್ರತಿವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗುರುಭವನ ನಿರ್ಮಿಸಿಕೊಡುವ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ತಾಲೂಕಿನ ಶಿಕ್ಷಕರು ಮನವಿ ಸಲ್ಲಿಸುತ್ತಿದ್ದರೂ ಸಚಿವರಾಗಲೀ, ಶಾಸಕರಾಗಲೀ, ಸರ್ಕಾರಿ ಅಧಿಕಾರಿಗಳಾಗಲೀ ಸಕಾರಾತ್ಮಕವಾಗಿ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ತಾಲೂಕಿನ ಸಾವಿರಾರು ಶಿಕ್ಷಕರ ಗುರುಭವನದ ಕನಸು ಇನ್ನೂ ಕನಸಾಗಿಯೇ ಉಳಿದಿದ್ದು, ಇಂದು ಮತ್ತೊಮ್ಮೆ ಗುರುಭವನಕ್ಕೆ ಜಮೀನು ಮಂಜೂರು ಮಾಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಸಿ.ವೆಂಕಟರಾಯಪ್ಪ, ಎ.ವೆಂಕಟೇಶ್ವರಲು, ಎಂ.ವಿ.ರಂಗಾರೆಡ್ಡಿ, ಕದಿರಪ್ಪ, ಕೆ.ವಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.