ಗಬ್ಬು ನಾರುತ್ತಿವೆ ಚರಂಡಿಗಳು

MGD PROBLEM
Published on

ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಪಟ್ಟಣದ ತಿರುಮಲೆಯ ಬರೋಡ ಬ್ಯಾಂಕ್‌ಬಳಿಯ ಚರಂಡಿಗಳು ಗಬ್ಬು ನಾರುತ್ತಿದೆ ಎಂದು ನಾಗರಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮರಥೋತ್ಸವ ಏ.21 ರಂದು ನಡೆದಿದ್ದು, ಈ ವೇಳೆ ನಡೆದ ವಿವಿಧ ಸಮುದಾಯಗಳ ಅರವಟಿಕೆಗಳ ನೀರನ್ನು ಈ ಚರಂಡಿಯಲ್ಲಿ ಹರಿಯುವುದರಿಂದ ಕಲುಷಿತ ನೀರು ಚರಂಡಿಯಲ್ಲಿ ನಿಂತು ಗಬ್ಬುನಾರುತ್ತಿದೆ. ಇದರಿಂದ ದೇವಾಲಯಕ್ಕೆ, ಬ್ಯಾಂಕ್‌ಗಳಿಗೆ ತೆರಳುವ ನಾಗರಿಕರು ಈ ಗಬ್ಬುವಾಸನೆ ಕುಡಿದು ತೆರಳುವಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿದ್ದಾರೆ.


ರಸ್ತೆಯಲ್ಲೆ ಒಳಚರಂಡಿ ಅಳವಡಿಸಿರುವುದರಿಂದ ಈ ಮ್ಯಾನ್‌ಹೊಲ್ ತುಂಬಿ, ಇದೆ ಚರಂಡಿಗೆ ಒಂದು ವರ್ಷದಿಂದ ಹರಿಯುತ್ತಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಸಾಕಷ್ಟು ಬಾರಿ ಸುದ್ದಿ ಪ್ರಕಟವಾದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಈ ಒಳಚರಂಡಿ ತ್ಯಾಜ್ಯದ ನೀರಿನ ವಾಸನೆಯನ್ನು ಸ್ಥಳೀಯರು ಕುಡಿಯುವಂತಾಗಿದೆ, ಈ ವಾಸನೆಯನ್ನು ಕುಡಿಯಲು ಸಾಧ್ಯವಾಗದೆ ಮನೆಯ ಬಾಗಿಲನ್ನು ಮುಚ್ಚಿಕೊಳ್ಳುವಂತಾಗಿದ್ದು, ಬಿರು ಬೇಸಿಗೆ ಇರುವುದರಿಂದ ಬಾಗಿಲನ್ನು ತೆಗೆಯಲಾರದ ಸ್ಥಿತಿ ಇಲ್ಲಿಯವರದ್ದಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.


ಬಲಾಡ್ಯರ ಮನೆಯ ಮುಂಭಾಗ ಜೆಸಿಬಿ ತಂದು ಚರಂಡಿ ಸ್ವಚ್ಛಗೊಳಿಸುತ್ತಾರೆ. ಆದರೆ, ಹೆಚ್ಚು ನಾಗರಿಕರು ವಾಸಮಾಡುವ ಮನೆಗಳ ಮುಂಭಾಗದ ಚರಂಡಿಗಳನ್ನು ಸ್ವಚ್ಛತೆ ಮಾಡದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಇದರಿಂದ ಚಿಕ್ಕಮಕ್ಕಳ ಆರೋಗ್ಯ ಕೆಡುತ್ತಿದೆ. ಈ ಸಂಬಂಧ ತುರ್ತಾಗಿ ಚರಂಡಿ ಸ್ವಚ್ಛಗೊಳಿಸದೆ ನಿರ್ಲಕ್ಷ್ಯಿಸಿದರೆ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಪುರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಚರಂಡಿ ಸ್ವಚ್ಛಗೊಳಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ. ಶುಕ್ರವಾರ ಭೇಟಿ ನೀಡಿ ಖುದ್ದಾಗಿ ನಿಂತು ಸ್ವಚ್ಛಗೊಳಿಸಲಾಗುವುದು.
ಸಿ.ವಿ. ಕುಸುಮಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net