ಬಾಗಿಲ ಕೈಹಿಡಿ, ಚಿಲಕದ ಮೇಲೂ ಕಳ್ಳರ ಕಣ್ಣು!

FotoJet (1)
Published on

ಚಿಂತಾಮಣಿಯಲ್ಲಿ ಹಿತ್ತಾಳೆ ವಸ್ತುಗಳನ್ನು ದೋಚಿದ ಖದೀಮರು | ಸಿಸಿ ಕ್ಯಾಮರಾದಲ್ಲಿ ದುರುಳರ ಕೃತ್ಯ ಸೆರೆ

ಚಿಂತಾಮಣಿ : ಹಣ, ಒಡವೆ, ವಾಹನ ಕಳವು ಮಾಡುತ್ತಿದ್ದ ಕಳ್ಳರ ಕಣ್ಣು ಈಗ ಮನೆ ಮುಂಬಾಗಿಲಿಗೆ ಅಳವಡಿಸಿರುವ ಬೆಲೆಬಾಳುವ ಹಿತ್ತಾಳೆ ವಸ್ತುಗಳ ಮೇಲೆೆ ಬಿದ್ದಿದೆ.
ನಗರದ ಅಂಜನಿ ಬಡಾವಣೆಯ ಹಲವಾರು ಮನೆಗಳ ಮುಂಬಾಗಿಲಿಗೆ ಅಳವಡಿಸಿದ್ದ ಹಿತ್ತಾಳೆಯ ಚಿಲಕ, ಕೈಹಿಡಿ ಮತ್ತಿತರ ವಸ್ತುಗಳನ್ನು ಗುರುವಾರ ಮುಂಜಾನೆ ಕಳ್ಳರು ದೋಚಿದ್ದಾರೆ. ಈ ಮೂಲಕ ಮಾಲೀಕರೇ ಹುಷಾರ್, ಹಿತ್ತಾಳೆ ಸಾಮಗ್ರಿಗಳನ್ನೂ ಭದ್ರ ಮಾಡಿಕೊಳ್ಳಿ ಎನ್ನುವಂತಿದೆ ಕಳ್ಳರ ಕೃತ್ಯ.
ಬಡಾವಣೆಯ ಕವಿ ಕಾಗತಿ ವೆಂಕಟರತ್ನಂ, ಭಾರತಿ, ಮುನಿಯಪ್ಪ ಮತ್ತು ಬೀರೇಗೌಡ ಅವರ ಮನೆಗಳ ಮುಂಬಾಗಿಲಿಗೆ ಅಳವಡಿಸಿದ್ದ ಬೆಲೆಬಾಳುವ ಹಿತ್ತಾಳೆ ಹ್ಯಾಂಡಲ್‌ಗಳನ್ನು ಕಳ್ಳರು ದೋಚಿದ್ದಾರೆ.
ವೆಂಕಟರತ್ನಂ ಅವರು ಶುಕ್ರವಾರ ಬೆಳಗಿನ ಜಾವ 4.30ರ ಸಮಯದಲ್ಲಿ ವಾಯವಿಹಾರಕ್ಕೆ ತೆರಳಲು ಮನೆಯ ಬಾಗಿಲು ತೆರೆದು ಹೊರಬಂದು ಬೀಗ ಹಾಕುವಾಗ ಹಿತ್ತಾಳೆ ಕೈಹಿಡಿ ಕಿತ್ತಿರುವುದು ತಿಳಿದಿದೆ. ಸಮೀಪದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಗುರುವಾರ ತಡರಾತ್ರಿ 2.45ರ ಸಮಯದಲ್ಲಿ ಕಳ್ಳನೊಬ್ಬ ಮನೆಯ ಗೇಟ್ ತೆಗೆದು ಬ್ರಾಸ್ ಹ್ಯಾಂಡಲ್ ಕಿತ್ತು ಒಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಅಕ್ಕಪಕ್ಕದ ನಿವಾಸಿಗಳಿಗೆ ವಿಷಯ ತಿಳಿಯುತ್ತಿದ್ದಂತೆ ಇತರ ಮನೆಗಳಲ್ಲೂ ಕಳ್ಳ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮನೆಯ ಮಾಲೀಕರು ನಗರಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net