ದಿವ್ಯರಥೋತ್ಸವ ಸಂಪನ್ನ

ದಿವ್ಯರಥೋತ್ಸವ ಸಂಪನ್ನ
Published on

ಗುಂಡ್ಲುಪೇಟೆ: ತಾಲೂಕಿನ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ದಿವ್ಯರಥೋತ್ಸವ ಸಂಪನ್ನಗೊಂಡಿತು.

ಚಿಕ್ಕತಿರುಪತಿ ಎಂದೇ ಕರೆಯಲಾಗುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ದಿವ್ಯ ರಥೋತ್ಸವ ನಡೆಸಲಾಗುತ್ತಿದೆ. ನೂತನ ವರ್ಷದ ಆರಂಭದಲ್ಲಿ ನಡೆಯುವ ರಥೋತ್ಸವಕ್ಕೆ ತಾಲೂಕಿನ ಜನರಲ್ಲದೆ ನೆರೆಯ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬಿದಿರಿನಿಂದ ನಿರ್ಮಿಸಿದ ರಥವನ್ನು ಬಣ್ಣಬಣ್ಣದ ಬಟ್ಟೆಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗಿನಿಂದಲೇ ಮೂಲ ವಿಗ್ರಹಗಳು ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಬೆಳಗ್ಗೆ 10 ಗಂಟೆ ವೇಳೆಗೆ ಪ್ರವಾಹದಂತೆ ಆಗಮಿಸಿದ ಭಕ್ತರು ದಿವ್ಯ ರಥವನ್ನು ಎಳೆಯಲು ಕಾದು ನಿಂತಿದ್ದರು.

ಉತ್ಸವ ಮೂರ್ತಿಗಳನ್ನು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಮಾಡಿ ರಥದಲ್ಲಿ ಕುಳ್ಳಿರಿಸಿದ ನಂತರ ಮಧ್ಯಾಹ್ನ 12.40 ಗಂಟೆಗೆ ಮುಜರಾಯಿ ಅಧಿಕಾರಿಯೂ ಆದ ತಹಸೀಲ್ದಾರ್ ಟಿ.ರಮೇಶ್ ಬಾಬು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಲಕ್ಷಾಂತರ ಭಕ್ತರು ಗೋವಿಂದಾ ಗೋಪಾಲ ಎಂಬ ಜಯಘೋಷಗಳನ್ನು ಕೂಗುತ್ತಾ ರಥವನ್ನು ದೇವಾಲಯದ ಸುತ್ತಲೂ ಶ್ರದ್ಧಾ ಭಕ್ತಿಯಿಂದ ಎಳೆದರು. ನವ ದಂಪತಿಗಳು ಹೂಹಣ್ಣುಗಳನ್ನು ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಪೊಲೀಸ್‌ಬಿಗಿ ಬಂದೋಬಸ್ತ್, ಏಕಮುಖ ವಾಹನ ಸಂಚಾರ: ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಸ್ಥಳೀಯರಲ್ಲದೆ ಹೊರಗಿನಿಂದಲೂ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಆಗುತ್ತಿದ್ದ ನೂಕುನುಗ್ಗಲು ತಪ್ಪಿಸಿ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬೆಟ್ಟಕ್ಕೆ ಹೋಗುವ ವಾಹನಗಳು ತೆರಕಣಾಂಬಿಯಿಂದ ಬೊಮ್ಮನಹಳ್ಳಿ ರಸ್ತೆಯಲ್ಲಿ ಕೊತ್ತಲವಾಡಿ ಮಾರ್ಗದಲ್ಲಿ ವಾಪಸಾಗುವಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಿತ್ತು. ಬೆಟ್ಟಕ್ಕೆ ಹೋಗುವ ಭಕ್ತರ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿ ಸುಗಮಸಂಚಾರಕ್ಕೆ ಅವಕಾಶ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net