ಸರಾಗವಾಗಿ ಸಾಗುತ್ತಿದೆ ದೇವಿ ದರ್ಶನ

ಸರಾಗವಾಗಿ ಸಾಗುತ್ತಿದೆ ದೇವಿ ದರ್ಶನ
Published on

ಹಾಸನ: ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಾಗುತ್ತಿದ್ದ ಜನರನ್ನು ಮಾತನಾಡಿಸಲು ಹೋದಾಗ ಅವರು ಮಾತನಾಡಲು ನಿಲ್ಲುವುದಕ್ಕೂ ಆಗದ ರೀತಿ ಮುಂದೆ ಸಾಗುತ್ತಿದ್ದರು. ಅಷ್ಟು ಸರಾಗವಾಗಿ ದರ್ಶನ ನಡೆಯುತ್ತಿರುವುದು ಸಂತೋಷವಾಗುತ್ತಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ದೇವಾಲಯದ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಧ ದಿನದ ದರ್ಶನದಲ್ಲಿ 91 ಸಾವಿರ ಜನ ದರ್ಶನ ಪಡೆದಿದ್ದಾರೆ. ನಾವು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸೇರಿಕೊಂಡು ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ. ಅದನ್ನು ಜಿಲ್ಲಾಡಳಿತ ಸಮರ್ಪಕವಾಗಿ ಅನುಷ್ಠಾನ ಮಾಡಿರುವುದಕ್ಕೆ ಸಾರ್ಥಕತೆ ಆಗಿದೆ. ಶ್ರೀ ಸಾಮಾನ್ಯರಿಗೆ ಚೆನ್ನಾಗಿ ದರ್ಶನವಾಗುತ್ತಿದೆ ಎಂದರೆ ಬಹಳ ಸಂತೋಷದ ಸಂಗತಿ ಎಂದರು.

ಸ್ಥಳೀಯರಿಗೆ ನಮ್ಮ ಊರಿನ ದೇವರ ದರ್ಶನ ಮಾಡಲು ನಮಗೆ ಅವಕಾಶವಿಲ್ಲ ಎನ್ನುವ ಆತಂಕವಿತ್ತು. ಈಗ ಸ್ಥಳೀಯರೂ ಆರಾಮವಾಗಿ ದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ. ಗಣ್ಯರಿಗೂ ಸರಾಗವಾಗಿ ದರ್ಶನ ನಡೆಯುತ್ತಿದೆ. ಹೊಸ ಬದಲಾವಣೆ ತಂದಾಗ ಆತಂಕವಿತ್ತು. ಆದರೆ, ಮೊದಲನೇ ದಿನ ಸರಾಗವಾಗಿ ದರ್ಶನ ನಡೆಯಿತು. ಎರಡನೇ ದಿನ ಶನಿವಾರ ಎರಡು ಪಟ್ಟು ಜನ ಬರುತ್ತಾರೆ ಎಂಬ ಆತಂಕವಿತ್ತು. ಇಂದು ಎರಡು ಪಟ್ಟು ಜನ ಬಂದಿದ್ದರೂ ನಿನ್ನೆಗಿಂತ ವೇಗವಾಗಿ ದರ್ಶನವಾಗಿದೆ, ಯಾವುದೂ ವ್ಯತ್ಯಾಸವಾಗಿಲ್ಲ ಎಂದರು.

ನಿನ್ನೆ ಶೌಚಗೃಹದ ಸಮಸ್ಯೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಾಗಿವೆ ಎಂದು ದೂರುಗಳು ಬಂದಿದ್ದವು. ಇಂದು ಖುದ್ದು ನಾನೇ ಹೋಗಿ ಶೌಚಗೃಹ ವೀಕ್ಷಣೆ ಮಾಡಿ ಬಂದಿದ್ದೇನೆ, ಎಲ್ಲವೂ ಚೆನ್ನಾಗಿವೆ. ಬ್ಯಾರಿಕೇಡ್‌ಗೆ ಹಾಕಿರುವ ಪಟ್ಟಿಯಿಂದ ಎಡವಿ ಗಾಯಗಳಾಗುತ್ತಿವೆ ಎಂದು ದೂರು ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಜಿಲ್ಲಾಡಳಿತದವರು ಆ ಪಟ್ಟಿಗೆ ಬಟ್ಟೆಯನ್ನು ಸುತ್ತಿ ಗಾಯ ಆಗದಂತೆ ತಡೆದಿದ್ದಾರೆ. ಬರುವಂತಹ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳಲು ಬದ್ಧರಿದ್ದೇವೆ ಎಂದರು.

ಇದಕ್ಕೂ ಮೊದಲು ಹಾಸನಾಂಬ ದೇವಾಲಯದ ಆವರಣದಲ್ಲಿ ಏರ್ಪಡಿಸಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಲ್ಲಿ 5-6 ಗಂಟೆ ಕಾದು ಧರ್ಮದರ್ಶನ ಮಾಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು 1ರಿಂದ 1.30 ಗಂಟೆಯೊಳಗೆ ಸುಲಲಿತವಾಗಿ ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ನಾಡಿನ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಸಿ ಅವರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಭಕ್ತರಿಗೆ ಜಾನಪದ ಕಲೆ, ಸುಗಮ ಸಂಗೀತದ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಸನಾಂಬ ಕಲಾಕ್ಷೇತ್ರ ಸೇರಿದಂತೆ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ.ಪಟೇಲ್, ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆರ್.ಪೂರ್ಣಿಮಾ, ಉಪ ವಿಭಾಗಾಧಿಕಾರಿ ಹಾಗೂ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net