ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬೈಂದೂರು ವಿಧಾನಸಭಾ ವ್ಯಾಪ್ತಿಯ ಬಂದರುಗಳ ಅಭಿವೃದ್ಧಿ ಹಾಗೂ ಮೀನುಗಾರರ ಕಲ್ಯಾಣ ವಿಚಾರವಾಗಿ ಕಾಂಗ್ರೆಸಿಗರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಂದರುಗಳ ಅಭಿವೃದ್ಧಿಗೆ ಹತ್ತಾರು ಮನವಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಹಾಗೂ ಮೀನುಗಾರಿಕೆ ಸಚಿವರಿಂದ ಅನುದಾನವೇ ಸಿಕ್ಕಿಲ್ಲ. ಗೊಂದಲ ಸೃಷ್ಟಿಸುವುದನ್ನು ಕಾಂಗ್ರೆಸಿಗರು ಕೂಡಲೇ ನಿಲ್ಲಿಸಬೇಕು ಎಂದು ಶಾಸಕರ ಗುರುರಾಜ್ ಗಂಟಿಹೊಳೆ ಆಗ್ರಹಿಸಿದ್ದಾರೆ.
ಬಂದರುಗಳಲ್ಲಿ ಮೂಲಸೌಕರ್ಯ, ಶುಚಿತ್ವ, ಆಕ್ಷನ್ ಹಾಲ್, ಜಟ್ಟಿ ನಿರ್ಮಾಣ, ಬ್ರೇಕ್‌ವಾಟರ್, ಡ್ರಜ್ಜಿಂಗ್, ಜಟ್ಟಿ ನಿರ್ಮಾಣ ಸಹಿತ ಬಂದರು, ಹೊರ ಬಂದರು ಅಭಿವೃದ್ಧಿ, ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ಮೇಲ್ದರ್ಜೆಗೆ ಸೇರಿಸಲು ಸಂಸದ ಬಿ.ವೈ.ರಾಘವೇಂದ್ರ ಅವರ ಮುತುವರ್ಜಿಯಲ್ಲಿ 653 ಕೋಟಿ ರೂ. ಬೈಂದೂರು ಕ್ಷೇತ್ರಕ್ಕೆ ಬಂದಿದೆ. ಗಂಗೊಳ್ಳಿ ಬಂದರು ಆಧುನಿಕರಣಕ್ಕೆ ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆಯಡಿ 22.18 ಕೋಟಿ ರೂ. ಬಿಡುಗಡೆಯಾಗಿದ್ದನ್ನು ರಾಜ್ಯ ಮೀನುಗಾರಿಕೆ ಸಚಿವರು ತಾವು ಮಂಜೂರುಗೊಳಿಸಿದ್ದು ಎಂದು ಸುಳ್ಳು ಹೇಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರವಂತೆ ಹೊರಬಂದರಿನ 2ನೇ ಹಂತದ ಕಾಮಗಾರಿಗೆ 2020-21ರಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅನುದಾನ ಮಂಜೂರುಗೊಳಿಸಿದ್ದು, 2022ರಲ್ಲಿ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಲಾಗಿತ್ತು. ನಂತರ ಲೈನ್ ಮ್ಯಾನೇಜ್‌ಮೆಂಟ್ ಫ್ಲಾೃನ್ ಸಿದ್ಧಪಡಿಸಲು 64 ಲಕ್ಷ ರೂ. ಅಗತ್ಯವಿದ್ದು, ಇದನ್ನು ನೀಡಲು ಕಾಂಗ್ರೆಸ್ ಸರ್ಕಾರ ಸತಾಯಿಸಿದೆ. ಬಳಿಕ ಸಂಸದ ರಾಘವೇಂದ್ರ ಅವರು ಅನುದಾನ ತರಿಸಿದ್ದಾರೆ. ಮರವಂತೆ ಬ್ರೇಕ್ ವಾಟರ್ ಹಾಗೂ ನಾಗಬನ ಬಳಿ ತುರ್ತು ಪ್ರತಿಬಂಧಕ ತಡೆಗೋಡೆ ಕಾಮಗಾರಿಗೆ 6 ಕೋಟಿ ರೂ.ಅನುದಾನಕ್ಕೆ ಮನವಿ ಮಾಡಲಾಗಿದ್ದು, ಉಪ್ಪುಂದದಲ್ಲೂ ಬ್ರೇಕ್ ವಾಟರ್ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆದರೆ ಸಚಿವರಿಂದ ಇದುವರೆಗೆ ಪ್ರತಿಕ್ರಿಯೆ ಶೂನ್ಯವಾಗಿದೆ ಎಂದರು. ಗಂಗೊಳ್ಳಿ ಬಂದರು ಜಟ್ಟಿ ನಿರ್ಮಾಣಕ್ಕೆ 12 ಕೋಟಿ ರೂ. ಮಂಜೂರುಗೊಳಿಸಲಾಗಿತ್ತು. ಗಂಗೊಳ್ಳಿ ಜಟ್ಟಿಯ ಹಳೇ ಡಯಾಫ್ರಾಂ ವಾಲ್ ಕುಸಿದು ಹೊಸದಾಗಿ ನಿರ್ಮಿಸುತ್ತದ್ದ 23 ಪೈಲ್‌ಗಳ ಮೇಲೆ ಬಿದ್ದ ಹಾನಿಯಾಗಿತ್ತು. ತನಿಖೆ ಮುಗಿಯುವ ತನಕ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿದ್ದು, ಶೀಘ್ರವೇ ಕಾಮಗಾರಿ ಕೊನೆಗೊಂಡರೆ ಮೀನುಗಾರರಿಗೆ ಸಹಾಯವಾಗಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಾಸಕ ಗುರುರಾಜ್ ಗಂಟಿ ದೋಣಿ ದುರಂತದ ಕುರಿತು ಪ್ರಸ್ತಾಪಿಸಿದ್ದು, ದೋಣಿ ದುರುಂತಕ್ಕೆ ಪರಿಹಾರ ಮೊತ್ತ 5 ರಿಂದ 10 ಲಕ್ಷ ರೂ.ಗೆ ಹೆಚ್ಚಿಸಲು ಸದನದಲ್ಲಿ ನಾನೇ ಪ್ರಸ್ತಾಪಿಸಿದ್ದೇನೆ. ಬಿಜೆಪಿ ಸರ್ಕಾರ ಕಡಲ್ಕೊರತೆ ತಡೆಗೆ 10 ಕೋಟಿ ರೂ. ನೀಡಿತ್ತು. ಕಾಂಗ್ರೆಸ್ ಸರ್ಕಾರ ಇದುವರೆಗೆ ಅನುದಾನವೇ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.