

ಹಾವೇರಿ: ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿಯನ್ನು ಸಂಘಟಿಸುವ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಮಾಗಾವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಜನಸೇವಕ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಮಾಣಿಕವಾಗಿ ಜನಸೇವೆ ಮಾಡಿದರೆ ಮತ್ತೊಮ್ಮೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಉನ್ನತ ಸ್ಥಾನಮಾನ ನೀಡಲಾಗುತ್ತದೆ. ರಾಜ್ಯದ ಅಶೋಕ ಗಸ್ತಿ, ಮಧ್ಯಪ್ರದೇಶದಲ್ಲಿ ಗ್ರಾಪಂ ಅಧ್ಯಕ್ಷೆಯೊಬ್ಬರಿಗೆ ರಾಜ್ಯಸಭೆ ಸ್ಥಾನಮಾನ ನೀಡಿದ್ದಾರೆ. ವಿಶಿಷ್ಟವಾಗಿ ಕೆಲಸ ಮಾಡಿ ರಾಜ್ಯ, ರಾಷ್ಟ್ರದ ಗಮನ ಸೆಳೆದರೆ ರಾಜ್ಯಸಭೆಗೆ ಹೋಗಲು ನಿಮಗೂ ಅವಕಾಶವಿದೆ ಎಂದು ಗ್ರಾಪಂ ಸದಸ್ಯರನ್ನು ಹುರಿದುಂಬಿಸಿದರು. ಜಿಲ್ಲೆಯ 8 ತಾಲೂಕುಗಳ ಪೈಕಿ ರಾಣೆಬೆನ್ನೂರ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ಪಕ್ಷ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು ಖುಷಿ ತಂದಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮಲು ಮಾತನಾಡಿ, ರಾಜ್ಯದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಹಾವೇರಿಯಂತೆ ಕರ್ನಾಟಕವನ್ನೂ ಕಾಂಗ್ರೆಸ್ ಮುಕ್ತ ಮಾಡಬೇಕಿದೆ. ಹಿಂದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಗುಡುಗುತ್ತಿದ್ದರು. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿರುವ ಸ್ಥಾನಗಳನ್ನು ನೋಡಿ ನಡುಗುತ್ತಿದ್ದಾರೆ ಎಂದರು.
ದೆಹಲಿಯಿಂದ ಗ್ರಾಪಂಗಳಿಗೆ ನೇರವಾಗಿ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ಸರ್ಕಾರದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುತ್ತೇವೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಗ್ರಾಪಂ ಸದಸ್ಯರಿಗೆ ಸಂವಿಧಾನದಲ್ಲಿ ಬಹುದೊಡ್ಡ ಅಧಿಕಾರ ನೀಡಲಾಗಿದೆ. ಪಿಎಂ, ಸಿಎಂಗೆ ಇಲ್ಲದ ಚೆಕ್ಗೆ ಸಹಿ ಮಾಡುವ ಅಧಿಕಾರ ನಿಮಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ. ಇದನ್ನು ದುರುಪಯೋಗಪಡಿಸಿಕೊಂಡ ಅನೇಕರು ಜೈಲಿಗೂ ಹೋಗಿದ್ದಾರೆ. ಪ್ರಾಮಾಣಿಕವಾಗಿ ಜನರ ಸೇವೆ ಸಲ್ಲಿಸಿ ಜನಸೇವಕರಾಗಿ ಎಂದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಪ್ರದೀಪ ಶೆಟ್ಟರ, ಆರ್. ಶಂಕರ ಮಾತನಾಡಿದರು. ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಇತರರಿದ್ದರು. ಶಶಿಧರ ಹೊಸಳ್ಳಿ ನಿರೂಪಿಸಿದರು. ಬಸವರಾಜ ಕಳಸೂರ ವಂದಿಸಿದರು.
ಬಿಜೆಪಿಯ ಹೊಸ ಸೊಸೆ: ‘ನಾನು ಬಿಜೆಪಿಗೆ ಹೊಸ ಸೊಸೆಯಾಗಿ ಬಂದಿದ್ದು, ಜಿಲ್ಲೆಯು ಕಾಂಗ್ರೆಸ್ ಮುಕ್ತವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವು ಇನ್ನಷ್ಟು ಸದೃಢವಾಗುವಂತೆ ತಳಮಟ್ಟದಿಂದ ನೀವು ಸಂಘಟಿಸಬೇಕು. ಈಗ ನಿಮ್ಮೆಲ್ಲರ ಚಿತ್ತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯತ್ತ ನೆಟ್ಟಿದೆ. ಯಾರೇ ಅಧ್ಯಕ್ಷರಾದರೂ ಎಲ್ಲರೂ ಒಮ್ಮತದಿಂದ ಅಭಿವೃದ್ಧಿಗೆ ಶ್ರಮಿಸಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಗ್ರಾಪಂನಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿದೆ. ಪುರುಷರು ಅವರಿಗೆ ರಾಜಕೀಯ ಹಾಗೂ ಜನರ ಕೆಲಸ ಮಾಡಲು ಬಿಡಿ. ಸರ್ಕಾರಕ್ಕೆ ಉತ್ತಮ ಹೆಸರು ಬರಲು ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಗ್ರಾಪಂಗೆ ಕೇಂದ್ರದಿಂದ 15ನೇ ಹಣಕಾಸು ಯೋಜನೆಯಲ್ಲಿ 1 ಕೋಟಿಗೂ ಅಧಿಕ ಅನುದಾನ ಬರಲಿದೆ.| ಶೋಭಾ ಕರಂದ್ಲಾಜೆ, ಸಂಸದೆ