ಹದಗೆಟ್ಟ ಬಿದರೂರು ರಸ್ತೆ

ಹದಗೆಟ್ಟ ಬಿದರೂರು ರಸ್ತೆ
Published on

ದಿನೇಶ್ ಮಾಲಂಬಿ ಶನಿವಾರಸಂತೆ

ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಿದರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 2ಕಿ.ಮೀ. ರಸ್ತೆ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರ ದುಸ್ತರವಾಗಿದೆ.

20 ವರ್ಷಗಳ ಹಿಂದೆ ಡಾಂಬರೀಕರಣಗೊಂಡ ರಸ್ತೆಯನ್ನು ಮತ್ತೆ ಅಭಿವೃದ್ಧಿಗೊಳಿಸಿಲ್ಲ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. 300ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಗ್ರಾಮದ ಜನರು ಇದೇ ರಸ್ತೆಯನ್ನೇ ಅವಲಂಬಿಸಿದ್ದಾರೆ. ಶನಿವಾರಸಂತೆ ಪಟ್ಟಣಕ್ಕೆ ಈ ರಸ್ತೆ ಮೂಲಕವೇ ತೆರಳಬೇಕು.

ಆದರೆ, ಈ ರಸ್ತೆಯಲ್ಲಿ ತೆರಳುವುದು ಸವಾಲಿನ ಕೆಲಸವಾಗಿದೆ. ಗುಂಡಿಗಳ ನಡುವೆ ರಸ್ತೆಯನ್ನು ಹುಡುಕುವಂತಾಗಿದೆ. ಮಕ್ಕಳು, ವೃದ್ಧರು ರಸ್ತೆಯಲ್ಲಿ ಸಾಗಲು ಸಂಕಷ್ಟಪಡುವಂತಾಗಿದೆ. ಸ್ವಲ್ಪ ಮಳೆ ಬಂದರೂ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕಾಣದಂತಾಗುತ್ತದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿವೆ.

ರೈತರು ಜಮೀನಿಗೆ ಸರಕುಗಳನ್ನು ತರಲು ಪರದಾಡುವಂತಾಗಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಸರಕು, ಸಲಕರಣೆಗಳನ್ನು ತೆಗೆದುಕೊಂಡು ಹೋಗುವುದೇ ಸವಾಲಾಗಿ ಪರಿಣಮಿಸಿದೆ. ಇನ್ನು ರಸ್ತೆ ಹದಗೆಟ್ಟಿರುವುದರಿಂದ ಬಾಡಿಗೆ ವಾಹನಗಳು ದುಪ್ಪಟ್ಟು ಬಾಡಿಗೆ ಪಡೆಯುತ್ತಾರೆ. ಇನ್ನು ಬಾಡಿಗೆ ವಾಹನಗಳು ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಾಲಾ ವಾಹನಗಳು ಕೂಡ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಎಷ್ಟು ಬಾರಿ ಜನ ಪ್ರತಿಗಳ ಗಮನಸೆಳೆದರೂ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net