ಕಾರ್ಯರೂಪಕ್ಕೆ ಬರುತ್ತಿಲ್ಲ ನಿರ್ಣಯ

sabhe
ಕುಂದಾಪುರ ಪುರಸಭೆ ಸಾಮನ್ಯ ಸಭೆ ನಡೆಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಸಭೆಯಲ್ಲಿ ಕೈಗೊಂಡ ನಿರ್ಣಯ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಬುಧವಾರ ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆ ನಡೆಯಿತು.

ಸದಸ್ಯ ಅಶ್ಫಕ್ ಮಾತನಾಡಿ ಪುರಸಭೆ ವ್ಯಾಪ್ತಿಯ ಕೋಡಿಯಲ್ಲಿ ಉದ್ಯಮಿಯೊಬ್ಬರಿಂದ ನಿರ್ಮಿಸಲಾಗುತ್ತಿರುವ ವಾಣಿಜ್ಯ ಕಟ್ಟಡ ಪರವಾನಗಿ ಪಡೆದುಕೊಳ್ಳುವ ಸಂದರ್ಭ ನೀಡಿರುವ ನಕ್ಷೆ ಪ್ರಕಾರ ಕಟ್ಟಡ ನಿರ್ಮಾಣವಾಗುತ್ತಿಲ್ಲ. ಎಲ್ಲ ನಿಯಮ ಗಾಳಿಗೆ ತೂರಿ ಪುರಸಭೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಸಂದರ್ಭ ನೀಡಿದ ದಾಖಲೆ ಹಾಗೂ ಮಾಹಿತಿ ನೀಡುವಂತೆ, ಅಲ್ಲಿಯವರೆಗೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.

ಸದಸ್ಯ ಗಿರೀಶ್ ಮಾತನಾಡಿ ಪುರಸಭೆಯಲ್ಲಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಮೂರು ಸಭೆ ನಡೆದಿದ್ದು, ಸಭೆಯಲ್ಲಿ ಜನರ ಹಿತದೃಷ್ಟಿಯಿಂದ ಮಂಡನೆಯಾದ ವಿಷಯ ನಡಾವಳಿಯಲ್ಲಿ ದಾಖಲಿಸುತ್ತಿದ್ದು, ನಿರ್ಣಯ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದರು. ನಾಲ್ಕು ವರ್ಷಗಳಿಂದ ನಡೆಸಿದ ಕಾಮಗಾರಿ ಹಾಗೂ ಇನ್ನಿತರ ಬಿಲ್ ಪಾವತಿಗಾಗಿ ಬರುತ್ತಿದ್ದು, ಹಣಕಾಸಿನ ವ್ಯವಸ್ಥೆ ನೋಡಿ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಗಿರೀಶ ದೇವಾಡಿಗ ವಿಷಯ ಪ್ರಸ್ತಾಪಿಸಿ, 1985ರ ಗೆಜೆಟ್ ನೋಟಿಫಿಕೇಶನ್ ಪ್ರಕಾರ ನೆಹರು ಮೈದಾನ ಪುರಸಭೆಗೆ ಹಸ್ತಾಂತರಿಸಬೇಕಿದೆ. ಈ ಬಗ್ಗೆ ಬೇರೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ಇಲ್ಲ. ಸುಮಾರು 4 ಎಕರೆಯಷ್ಟಿದ್ದ ನೆಹರು ಮೈದಾನ ಇದೀಗ 1.65 ಎಕರೆಗೆ ಬಂದು ನಿಂತಿದೆ. ಮೈದಾನವನ್ನು ಪುರಸಭೆಗೆ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಕೋಡಿಯಲ್ಲಿ ಪ್ರವಾಸಿಗರ ರಕ್ಷಣೆಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಲಕ್ಷ್ಮೀಬಾಯಿ ಹೇಳಿದರು. ಹುಂಚಾರಬೆಟ್ಟಿನಲ್ಲಿ ಅಂಗವಿಕಲರೊಬ್ಬರ ಮನೆ ಸಮೀಪ 14 ಮೀ. ರಸ್ತೆ ಬಾಕಿ ಇದ್ದ ಬಗ್ಗೆ 4 ಮನವಿ ನೀಡಿದರೂ ಮೀಟಿಂಗ್‌ಗೆ ಸೇರಿಸಿಲ್ಲ ಎಂದು ಶೇಖರ ಪೂಜಾರಿ ಹೇಳಿದರು.

ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ಪ್ರತಿ ಬಾರಿ ಬೇರೆ ಬೇರೆಯವರನ್ನು ಕಳುಹಿಸುವ ಕಾರಣ ಸಭೆಯಲ್ಲಿ ಸೂಚಿಸಿದ್ದೆಲ್ಲ ವ್ಯರ್ಥವಾಗುತ್ತದೆ. ಕಾಮಗಾರಿ ನಡೆಯುವುದೇ ಇಲ್ಲ ಎಂದು ಸಂತೋಷ್ ಶೆಟ್ಟಿ, ಗಿರೀಶ್ ಜಿ.ಕೆ., ಶ್ರೀಧರ ಶೇರೆಗಾರ್, ದೇವಕಿ ಸಣ್ಣಯ್ಯ, ಶೇಖರ್ ಪೂಜಾರಿ ಮೊದಲಾದವರು ಹೆದ್ದಾರಿ ಸಮಸ್ಯೆ ಹೇಳಿಕೊಂಡರು. ಯೋಜನಾ ನಿರ್ದೇಶಕರನ್ನು ಕರೆದು ಸಭೆ ಮಾಡಲು ಎಸಿಯವರಿಗೆ ಮನವಿ ನೀಡಲಾಗಿತ್ತು. ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಡಿಸಿ ಮೂಲಕ ಸಭೆ ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಶೌಚಗೃಹ ಅವ್ಯವಸ್ಥೆ: ಕುಂದಾಪುರ ಪುರಸಭೆ ಕಾರ್ಯಾಲಯದಲ್ಲಿರುವ ಶೌಚಗೃಹ ಅವ್ಯವಸ್ಥೆಯಿಂದಿದ್ದು ಒಳಗೆ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಅನೇಕ ಬಾರಿ ಆಡಳಿತದ ಗಮನಕ್ಕೆ ತಂದರೂ ದುರಸ್ತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬರೆಕಟ್ಟು ತೋಡು ಕುಸಿದು ಆರು ತಿಂಗಳು ಕಳೆದರೂ ದುರಸ್ತಿ ಆಗಿಲ್ಲ, ಯುಜಿಡಿ ಕಾಮಗಾರಿ ನೆಲಕಚ್ಚಿ ಹೋಗಿದೆ, ಈ ಬಗ್ಗೆ ಕೇಳುವವರೇ ಇಲ್ಲ. ಕುಂದಾಪುರ ಕೊಳಚೆ ನೀರು ಎಲ್ಲಿಗೆ ಹೋಗುತ್ತಿದೆ ಮಾಹಿತಿ ನೀಡಿ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧ್ಯಕ್ಷ ಮೋಹನದಾಸ ಶೆಣೈ, ಪುರಸಭೆ ಕಾರ್ಯಾಲಯದಲ್ಲಿನ ಶೌಚಗೃಹ ದುರಸ್ತಿ ಬಗ್ಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದ್ದು, ಆದಷ್ಟು ಶೀಘ್ರ ದುರಸ್ತಿ ಮಾಡಲಾಗುವುದು. ಯುಜಿಡಿ ಕಾಮಗಾರಿ ಬಗ್ಗೆ ಶಾಸಕರು ಸಭೆ ಕರೆದು ಚರ್ಚೆ ನಡೆಸಿದ್ದು, ಸಮಸ್ಯೆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದರು.

ಹಂಪ್ಸ್ ನಿರ್ಮಿಸಿಲ್ಲ: ನಗರದ ಮುಖ್ಯ ರಸ್ತೆಯಲ್ಲಿ ಹಂಪ್ಸ್ ನಿರ್ಮಿಸಲು ನಿರ್ಣಯಕೈಗೊಳ್ಳಲಾಗಿದ್ದರೂ ನಿರ್ಮಿಸಿಲ್ಲ. ಅನೇಕ ಕಡೆ ರಸ್ತೆಯಲ್ಲಿ ಇಂಟರ್‌ಲಾಕ್ ಕಿತ್ತು ಹೋಗಿದೆ ಎಂದು ಸದಸ್ಯ ಗಿರೀಶ್ ದೇವಾಡಿಗ ದೂರಿದರು. ದಲಿತ ಕುಟುಂಬಕ್ಕೆ ಹಕ್ಕುಪತ್ರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವೀಣಾ ಭಾಸ್ಕರ ಪ್ರಸ್ತಾಪಿಸಿ ಶೀಘ್ರದಲ್ಲಿ ಕ್ರಮಕೈಗೊಳ್ಳಲು ಒತ್ತಾಯಿಸಿದರು.

ರಿಕ್ಷಾ ನಿಲ್ದಾಣ ಅಧಿಕೃತಗೊಳಿಸಿ: ಈಗಾಗಲೇ ಅಧಿಕೃತಗೊಂಡ ರಿಕ್ಷಾ ನಿಲ್ದಾಣ ಹೊರತುಪಡಿಸಿ ಇನ್ನುಳಿದ ಸುಮಾರು 15 ರಿಕ್ಷಾ ನಿಲ್ದಾಣ ಅಧಿಕೃತಗೊಳಿಸಲು ಕಂದಾಯ ಇಲಾಖೆ ಜಾಗ ಗುರುತಿಸಿ ನಕ್ಷೆ ತಯಾರಿಸಿ ನೀಡಬೇಕು ಎಂದು ಸದಸ್ಯ ಸಂತೋಷ ಶೆಟ್ಟಿ ಹೇಳಿದರು. ಅಧಿಕೃತಗೊಂಡ ರಿಕ್ಷಾ ನಿಲ್ದಾಣ ಅಭಿವೃದ್ಧಿಪಡಿಸಬೇಕೆಂದು ಸದಸ್ಯೆ ವೀಣಾ ಭಾಸ್ಕರ ಆಗ್ರಹಿಸಿದರು.

ಬಸ್ ನಿರ್ವಾಹಕರಿಗೆ ತಿಳಿವಳಿಕೆ

ಗಂಗೊಳ್ಳಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸಲಾಗುತ್ತಿದೆ. ಬಸ್ ನಿಲ್ದಾಣದಿಂದ ಶಾಸ್ತ್ರೀ ವೃತ್ತದವರೆಗೆ ಮಹಿಳಾ ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ ಎಂದು ಸದಸ್ಯ ಚಂದ್ರಶೇಖರ ಖಾರ್ವಿ, ಆರೋಪಿಸಿದರು. ಉತ್ತರಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿ ಉದಯ ಶೆಟ್ಟಿ, ಗಂಗೊಳ್ಳಿ-ಕುಂದಾಪುರ ಮಾರ್ಗದಲ್ಲಿ ನಾಲ್ಕು ಪರವಾನಗಿ ಇದ್ದರೂ ಎರಡು ಬಸ್ ಸಂಚರಿಸುತ್ತಿವೆ. ಮಹಿಳಾ ಪ್ರಯಾಣಿಕರನ್ನು ಮಧ್ಯದಲ್ಲಿ ಇಳಿಸಿ ಹೋಗುತ್ತಿರುವ ಬಗ್ಗೆ ಬಸ್ ನಿರ್ವಾಹಕರಿಗೆ ತಿಳಿವಳಿಕೆ ನೀಡಲಾಗುವುದು ಎಂದರು.

ರಿಂಗ್‌ರೋಡ್ ಕಾಮಗಾರಿ ಅಸಮರ್ಪಕ

ರಿಂಗ್‌ರೋಡ್ ಕಾಮಗಾರಿ ಅಸಮರ್ಪಕವಾಗಿದೆ. ಪೈಪ್‌ಲೈನ್‌ಗೆ ಜಾಗ ಇಡಲಿಲ್ಲ. ಯುಜಿಡಿಗೆ ಅವಕಾಶ ಇಲ್ಲ. ಹೀಗಾದರೆ ಮಳೆಗಾಲದಲ್ಲಿ ಖಾರ್ವಿಕೇರಿ ಮುಳುಗುತ್ತದೆ. ಕಾಮಗಾರಿ ತಕ್ಷಣ ನಿಲ್ಲಿಸದೇ ಇದ್ದರೆ ಅಷ್ಟೂ 23 ವಾರ್ಡ್‌ಗಳ ಕಾಂಕ್ರಿಟನ್ನು ಒಡೆದು ಹಾಕಿ ಪ್ರತಿಭಟಿಸುತ್ತೇವೆ ಎಂದು ಚಂದ್ರಶೇಖರ ಖಾರ್ವಿ ಹೇಳಿದರು. ಉತ್ತರಿಸಲು ಲೋಕೋಪಯೋಗಿ ಇಲಾಖೆಯವರೇ ಗೈರಾಗಿದ್ದರು. ರಿಂಗ್‌ರೋಡ್ ಬಗ್ಗೆ ಶಾಸಕರ ಮುಖಾಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net