

ಕಾರ್ಕಳ: ಸಮರ್ಥ ಉಪನ್ಯಾಸಕ ವಿದ್ಯಾರ್ಥಿ ಜೀವನಕ್ಕೆ ಹೊಸ ಸ್ಫೂರ್ತಿ ತುಂಬುವುದರ ಜತೆಗೆ ಸಾಮಾನ್ಯ ವಿದ್ಯಾರ್ಥಿಯನ್ನು ಅಸಾಮಾನ್ಯ ಸಾಧನೆ ಮಾಡುವತ್ತ ಪ್ರೇರೇಪಿಸುತ್ತಾನೆ. ಅಂತಹ ಶಿಕ್ಷಕರು ಸಮಾಜದ ಆಸ್ತಿ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ಇತ್ತೀಚೆಗೆ ವಿಷಯಾಧಾರಿತ ಉಪನ್ಯಾಸಕರ (ಇತಿಹಾಸ, ವಾಣಿಜ್ಯ ಶಾಸ್ತ್ರ, ರಾಜ್ಯಶಾಸ್ತ್ರ, ಕನ್ನಡ) 2 ದಿನಗಳ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದರು. ಉಡುಪಿ ಜಿಲ್ಲಾ ಸರ್ಕಾರಿ ಪ.ಪೂ. ಉಡುಪಿ ಜಿಲ್ಲಾ ಉಪನ್ಯಾಸಕರ ಸಂಘ ಅಧ್ಯಕ್ಷ ಡಿ.ಕೆ.ಮೊಗೇರ, ಜಿಲ್ಲಾ ಸಂಯೋಜಕ ವರ್ಗೀಸ್, ವಾಣಿಜ್ಯ ಶಾಸ್ತ್ರ ಜಿಲ್ಲಾ ಸಂಯೋಜಕಿ ಚಂದ್ರಕಲಾ, ರಾಜ್ಯಶಾಸ್ತ್ರ ಜಿಲ್ಲಾ ಸಂಯೋಜಕ ವಾಸು ಮೊಗೇರ, ಇತಿಹಾಸ ವಿಭಾಗ ಜಿಲ್ಲಾ ಸಂಯೋಜಕ ಗ್ರೇಸಿ, ಕನ್ನಡ ವಿಭಾಗ ಜಿಲ್ಲಾ ಸಂಯೋಜಕ ಉದಯ ಕುಮಾರ್ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಅನುದಾನಿತ ಹಾಗೂ ಅನುದಾನ ರಹಿತ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘ ಅಧ್ಯಕ್ಷ ದಿನೇಶ್ ಎಂ.ಕೊಡವೂರು ಸ್ವಾಗತಿಸಿ, ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.