

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಜನ್ಮ, ಜ್ಞಾನ ಕೊಟ್ಟವರ ಋಣ ತೀರಿಸಲು ಪ್ರಯತ್ನಿಸಬೇಕು. ಅದನ್ನು ಬಿಟ್ಟು ಅಸಡ್ಡೆ ತೋರಿದರೆ ತಪ್ಪಾಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಎಸ್‌ಜೆಸಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ಮತ್ತು ಸತ್ಸಂಗ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮಹಾ ಸಾಮ್ರಾಜ್ಯವನ್ನು ದಯಪಾಲಿಸಿದ ತಂದೆಯನ್ನು ಬಿಟ್ಟು ಗುರು ಅರಿಸ್ಟಾಟಲ್‌ಗೆ ಏಕೆ ಹೆಚ್ಚಿನ ಗೌರವ ನೀಡುತ್ತಿರುವೆ ಎಂಬುದಾಗಿ ಪ್ರಶ್ನಿಸಿದಾಗ ವಿಶ್ವವಿಜೇತ ಆಕಾಂಕ್ಷಿ ರಾಜ ಅಲೆಗ್ಸಾಂಡರ್, ಅಪ್ಪ ಅಮ್ಮ ದೇಹವನ್ನು ಕೊಟ್ಟು ಒಲವಿನಲ್ಲಿ ಬಂಧಿಸಿದರೆ, ಜಗತ್ತಿನ ಬಿಡುಗಡೆಯ ದಾರಿಯನ್ನು ತೋರಿಸಿದ್ದು ಮಾತ್ರ ಗುರು ಎದು ಹೇಳಿದ. ಇದು ಜ್ಞಾನಧಾರೆ ಎರೆಯುವವರ ಗೌರವಯುತ ಸ್ಥಾನದ ಮಹತ್ವವನ್ನು ತಿಳಿಸುತ್ತದೆ ಎಂದರು.
ಮಲಗಿದ್ದ ವೇಳೆ ಯಾರಾದರೂ ಬಂದು ಎಬ್ಬಿಸಿದ ಸಂದರ್ಭದಲ್ಲಿ ಬೈಗುಳದ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಹಾಗೆಯೇ ಜಗತ್ತಿಗೆ ಜ್ಞಾನದ ಸಂದೇಶವನ್ನು ಸಾರಿದ ಏಸ್ತು ಕ್ರಿಸ್ತ, ಬಸವಣ್ಣ ಸೇರಿ ಅನೇಕ ಗುರುಗಳು ಜೀವವನ್ನು ಕಳೆದುಕೊಂಡಿದ್ದಾರೆ. ಆದರೂ ಅವರ ಮಹತ್ವದ ಸಂದೇಶಗಳು ಪ್ರಭಾವ ಬೀರುವಲ್ಲಿ ಮುನ್ನಡೆ ಸಾಧಿಸಿದವು ಎಂದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಶ್ರೀಗಳಿಗೆ ಶಿಕ್ಷಣದ ಮಹತ್ವದ ಅರಿವಿದ್ದರಿಂದ ಅವಿಭಜಿತ ಕೋಲಾರ ಜಿಲ್ಲೆ ಸೇರಿ ವಿವಿಧ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಿ, ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದು, ಆಧ್ಯಾತ್ಮಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರದಲ್ಲೂ ಮಹತ್ತರವಾದ ಕೊಡುಗೆ ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಂಧಕಾರವೆಂಬ ಅಜ್ಞಾನದಿಂದ ಜ್ಞಾನದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಮಹನೀಯನೇ ಗುರು. ಇದು ದೊಡ್ಡ ಸೇವೆ. ದೇಶದಲ್ಲಿ ಗುರು ಪರಂಪರೆಗೆ ಹಲವು ಯುಗಗಳ ಇತಿಹಾಸ ಇದೆ. ಕೇವಲ ಮೇಲ್ವರ್ಗಕ್ಕೆ ಸೀಮಿತವಾಗಿದ್ದ ಗುರುವಿನ ಸ್ಥಾನವು, ಇಂದು ಶೂದ್ರರಾದಿಯಾಗಿ ಎಲ್ಲ ವರ್ಗದಲ್ಲೂ ಕಂಡು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಅನೇಕರು ಮಠದ ಸೇವೆಯಲ್ಲಿ ತೊಡಗಿದ್ದು ಇದರ ನಡುವೆ ಸಣ್ಣ ಕೊಡುಗೆಯಾಗಿ ಸ್ವಕ್ಷೇತ್ರದಲ್ಲಿ ಮಠಕ್ಕೆ ಅಗತ್ಯ ಜಾಗ ಕೊಡಿಸಿ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈಗ ತಂತ್ರಜ್ಞಾನವು ಮುಂದುವರಿದಿದ್ದು ಅಂಗೈನಲ್ಲಿಯೇ ಜಗತ್ತನ್ನು ಹಿಡಿತದಲ್ಲಿಟ್ಟುಕೊಂಡಿದೆ. ಹಾಗೆಯೇ ನೇಗಿಲು ಹಿಡಿದು, ಹಾಗೆಯೇ ಕಷ್ಟಪಟ್ಟು ದುಡಿದು ದೇಶಕ್ಕೆ ಅನ್ನವನ್ನು ನೀಡುವ ಕೈಗಳು ಸಹ ಹೆಚ್ಚಿನ ಬಲ ಪಡೆಯಬೇಕಾಗಿದೆ ಎಂದರು.
ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಶ್ರೀ ಮಂಗಳನಾಥ ಸ್ವಾಮೀಜಿ, ಶ್ರೀ ರಾಮಕೃಷ್ಣ ಸ್ವಾಮೀಜಿ, ಶ್ರೀ ನರಸಿಂಹ ಅವಧೂತ ಸ್ವಾಮೀಜಿ, ಶ್ರೀ ಮಹಾದೇವ ಸ್ವಾಮೀಜಿ, ಶ್ರೀ ನಾರಾಯಣಸ್ವಾಮೀಜಿ, ವೈದ್ಯ ಡಾ ಕೆ.ಪಿ.ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.