ಬಡವರ ಶಾಪ ತಟ್ಟದೆ ಬಿಡಲ್ಲ

1
ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ, ಮುಖಂಡರಾದ ಸಾಯಿನಾಥರೆಡ್ಡಿ, ವಿನೋದ್ ಕುಮಾರ್, ಆ.ನ.ಮೂರ್ತಿ ಇತರರು ಇದ್ದರು.
Published on

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಗುಡುಗಿದ ಸಂಸದ ಡಾ.ಕೆ.ಸುಧಾಕರ್

ಬಾಗೇಪಲ್ಲಿ: ತಾಲೂಕಿನ ಪರಿಶಿಷ್ಟರು ಹಾಗೂ ಬಡವರ ಜಮೀನು ಕಸಿದುಕೊಂಡು ದಬ್ಬಾಳಿಕೆ ನಡೆಸಿ ಎಷ್ಟು ಬಾರಿ ಶಾಸಕರಾದರೇನು ಪ್ರಯೋಜನ? ಬಡವರ ಕಣ್ಣೀರಿನ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಅವರು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ವಿರುದ್ಧ ಗುಡುಗಿದರು.

ತಾಲೂಕಿನ ಗೂಳೂರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಸಂಸದರ ನಡೆ ಜನರ ಕಡೆ ಕಾರ್ಯಕ್ರಮದಲ್ಲಿ ಗೊರ್ತಪಲ್ಲಿ, ಗೂಳೂರು, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಬಾಗೇಪಲ್ಲಿ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಏನು ಎಂದು ನನ್ನ ಹಳೇ ಸ್ನೇಹಿತ ಶಾಸಕ ಸುಬ್ಬಾರೆಡ್ಡಿ ಜನಸ್ಪಂದನ ವೇದಿಕೆಯಲ್ಲಿ ಪ್ರಶ್ನೆ ಮಾಡಿರುವುದು ಹಾಸ್ಯಾಸ್ಪದವಾಗಿದೆ. ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್(ಪಿಎಂಜಿಎಸ್‌ವೈ) ಯೋಜನೆಯಡಿ 100 ಕಿಮೀ ಉದ್ದದ ಟಾರ್ ರಸ್ತೆಗಳನ್ನು ನೀಡಲಾಗಿದೆ. ಭಾರತ ಸರ್ಕಾರದ ಗ್ರಾಮ ವಿಕಾಸ ಯೋಜನೆಯಡಿ 5 ಗ್ರಾಪಂಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಬಾಗೇಪಲ್ಲಿ, ಮಿಟ್ಟೇಮರಿ, ಚಿಂತಾಮಣಿ ಮಾರ್ಗ, ಗುಡಿಬಂಡೆ-ಬಾಗೇಪಲ್ಲಿ ಹೆದ್ದಾರಿ ರಸ್ತೆ ಕಾಮಗಾರಿಗೆ ಕೇಂದ್ರ ಅನುದಾನ ನೀಡಿದೆ, 190 ಕೋಟಿ ರೂ. ಅನುದಾನದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆಯುತ್ತಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರವಿದ್ದಾಗ ಚಾಕವೇಲು, ಜೂಲಪಾಳ್ಯ ಬಳಿ ಎರಡು ಆಸ್ಪತ್ರೆ ನಿರ್ಮಿಸಲಾಗಿದೆ. ಬಾಗೇಪಲ್ಲಿಗೆ ಐಸಿಯು ಘಟಕ, ಬಿಸಿಎಂ ಇಲಾಖೆಗೆ ಮೂರು ವಸತಿ ನಿಲಯ ಸೇರಿ ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಾವಿರಾರು ಕೋಟಿ ಅನುದಾನ ನೀಡಿರುವ ಬಗ್ಗೆ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡಿದ್ದೇವೆ, ಆದರೆ, ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ತಮ್ಮ ಸರ್ಕಾರದ ಅವಧಿಯಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ತಂದಿರುವ ಅನುದಾನದ ಮಾಹಿತಿ ಬಹಿರಂಗಪಡಿಸಿ ಮಾಧ್ಯಮಗಳಿಗೆ ದಾಖಲೆ ನೀಡಬೇಕಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಯೋಜನೆಗಳಿಗೆ ನಿತ್ಯ ಭೂಮಿಪೂಜೆ ನೆರವೇರಿಸಿ ಇದೆಲ್ಲವೂ ಕಾಂಗ್ರೆಸ್ ಸರ್ಕಾರದ ಸಾಧನೆ ಎಂಬ ಭ್ರಮೆಯಿಂದ ಸುಬ್ಬಾರೆಡ್ಡಿ ಹೊರ ಬರಬೇಕಾಗಿದೆ ಎಂದು ಗುಡುಗಿದರು.

ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಬೆಳಗ್ಗೆ ಮೂರು ಕಾಸು ಕೊಟ್ಟು ಸಂಜೆ ಮನೆ ಗಂಡಸರಿಂದ ಆರು ಕಾಸು ವಸೂಲಿ ಮಾಡಿಕೊಳ್ಳುತ್ತಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಪ್ರಚಾರ ಮಾಡಿಕೊಳ್ಳುತ್ತಿದೆ, ಚುನಾವಣಾ ಸಮಯದಲ್ಲಿ ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಾದರೂ ಒಂದು ಕೆಜಿ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಇಂದಿಗೂ ಪ್ರತಿ ವ್ಯಕ್ತಿಗೂ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ರೈತರ ಬ್ಯಾಂಕ್ ಖಾತೆಗೆ 6 ಸಾವಿರ ರೂ. ಜಮೆ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ನೀಡಬೇಕಾಗಿರುವ 4 ಸಾವಿರ ರೂ.ಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಡಾ.ಕೆ. ಸುಧಾಕರ್ ಕಿಡಿಕಾರಿದರು.

ದರಖಾಸ್ತು ಜಮೀನಿನ ಮೇಲೆ ಶಾಸಕರ ಕಣ್ಣು

ಕಾಂಗ್ರೆಸ್‌ಗೆ ಮತ ಹಾಕದ ಕ್ಷೇತ್ರದ ಜನರ ಮೇಲೆ ಸುಳ್ಳು ಕೇಸು ಹಾಕಿಸಿ ಬೆದರಿಸಿ ಕಿರುಕುಳ ನೀಡುವುದು, ಕ್ಷೇತ್ರದ ಬಡವರಿಗೆ, ದಲಿತರಿಗೆ ನೀಡಿರುವ ದರಖಾಸ್ತು ಜಮೀನುಗಳನ್ನು ದೌರ್ಜನ್ಯದಿಂದ ಕಿತ್ತುಕೊಂಡು ಬಡಜನತೆಗೆ ಕಣ್ಣೀರು ಹಾಕಿಸಿ ಜನರ ಪ್ರೀತಿ ಗಳಿಸದೆ ಚುನಾವಣೆ ಸಮಯದಲ್ಲಿ ಆಸೆ, ಆಮಿಷವೊಡ್ಡಿ ಮೂರು ಬಾರಿ ಶಾಸಕರಾದರೂ ಏನೂ ಪ್ರಯೋಜನವಿಲ್ಲ. ಎಲ್ಲರೂ ನಮ್ಮವರೇ ಎಂಬ ಭಾವನೆಯೊಂದಿಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಆಸಕ್ತಿವಹಿಸಿದರೆ ಜನ ಪ್ರೀತಿಸುತ್ತಾರೆ ಎಂದು ಸಂಸದರು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಸೊಸೈಟಿ ಅಧ್ಯಕ್ಷ ಜೆಪಿ ರೆಡ್ಡಿ, ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ, ಸದಸ್ಯ ಸಾಯಿನಾಥರೆಡ್ಡಿ, ಮುಖಂಡರಾದ ಶ್ರೀನಿವಾಸರೆಡ್ಡಿ, ಎಂ.ವಿ.ವಿನೋದ್ ಕುಮಾರ್, ಸೋಮಶೇಖರರೆಡ್ಡಿ, ಮನೋಹರರೆಡ್ಡಿ, ಕೆ.ಟಿ.ವೀರಾಂಜನೇಯ, ಆ.ನ.ಮೂರ್ತಿ, ವೆಂಕಟೇಶಪ್ಪ, ಚನ್ನರಾಯಪ್ಪ, ನಾರಾಯಣನಾಯಕ್, ಜಿ.ಬೈಯಪ್ಪ, ನಂಜುಂಡಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net