ಆರೆಸ್ಸೆಸ್​ಗೆ ದೇಶವೇ ಹೃದಯ

18sirsi6
Published on

ಶಿರಸಿ: ಮಾನವ ದೇಹದಲ್ಲಿ ಹೃದಯಕ್ಕೆ ಯಾವ ಪ್ರಾಮುಖ್ಯತೆ ಇದೆಯೋ? ಅದೇ ಪ್ರಾಧಾನ್ಯತೆ ದೇಶದ ವಿಷಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕಿದೆ ಎಂದು ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಭಟ್ಟ ಕಲ್ಲಡ್ಕ ಹೇಳಿದರು.

ತಾಲೂಕಿನ ಗೋಳಿಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿರಸಿ ವಿಭಾಗದಿಂದ ಏರ್ಪಡಿಸಿದ್ದ ನಾಗರಿಕಗೋಷ್ಠಿಯ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಮಾನವ ದೇಹದ ಜೀವಂತಿಕೆಗೆ ಸಾಕ್ಷಿಯಾಗಿ ರಕ್ತವನ್ನು ಹೃದಯ ಒದಗಿಸಿದಂತೆ ದೇಶದ ಜನತೆಯ ಆತ್ಮಶಕ್ತಿ ಜೀವಂತ ಇಡುವ, ಜಾಗೃತಗೊಳಿಸುವ ಕೆಲಸವನ್ನು ಸಂಘವು ಮಾಡುತ್ತಿದೆ ಎಂದರು.

ದೇಶದ ವಿವಿಧೆಡೆ ಮಿನಿ ಪಾಕಿಸ್ತಾನ ಹುಟ್ಟುತ್ತಿದೆ. ಇಂಥ ಕಾಲಘಟ್ಟದಲ್ಲಿ ಹಿಂದು ಧರ್ವಿುಯರಿಗೆ ತಾನು ಹಿಂದು ಎಂಬ ಭಾವನೆ ಜತೆ ಗರ್ವ ಬರಬೇಕಾದ ಅಗತ್ಯವಿದೆ. ಎಲ್ಲಿಯವರಗೆ ತಾನು ಹಿಂದು ಎಂಬ ಗರ್ವ ಬರುವುದಿಲ್ಲವೋ? ಅಲ್ಲಿಯವರೆಗೆ ದೇಶದಲ್ಲಿ ಹಿಂದುವಾಗಿ ಬದುಕುವ ವಾತಾವರಣ ಸೃಷ್ಟಿಯಾಗುವುದಿಲ್ಲ. ಹಿಂದು ಎಂದರೆ ಕೋಮುವಾದಿ ಎನ್ನುವ ಭಾವನೆಯನ್ನು ಬ್ರಿಟೀಷರು ಹುಟ್ಟು ಹಾಕಿದ್ದರು. ಅದನ್ನು ಇಂದಿಗೂ ಕೆಲ ಸ್ವಹಿತಾಸಕ್ತಿಯುಳ್ಳವರು ಜತನದಿಂದ ಕಾಪಿಟ್ಟುಕೊಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯವಾದಿಗಳು ಇನ್ನಷ್ಟು ದಿಟ್ಟತನ ತೋರಬೇಕಿದೆ ಎಂದರು.

ಸಂಪ್ರದಾಯವು ಮೂಢನಂಬಿಕೆ ಎನ್ನುವ ಮಾತುಗಳು ತೀವ್ರವಾಗಿ ಕೇಳಿಬರುತ್ತಿವೆ. ಆದರೆ, ಸಂಪ್ರದಾಯ ಆಚರಿಸುವ ಮನೆಯಲ್ಲಿ ಸಕಾರಾತ್ಮಕವಾದ ಶಕ್ತಿ ನಿರ್ವಣವಾಗುತ್ತದೆ. ಹಿಂದುಗಳ ಪೂಜನೀಯ ಗ್ರಂಥಗಳಾದ ಭಗವದ್ಗೀತೆ, ರಾಮಾಯಣ, ಮಹಾಭಾರತ ಇವುಗಳೆಲ್ಲ ಪುಣ್ಯ ಸಂಪಾದನೆಗಿರುವುದಲ್ಲ, ಬದಲಾಗಿ ಜೀವನವನ್ನು ರೂಪಿಸುವ ದಾರಿದೀಪವಾಗಿವೆ. ಅವುಗಳ ಅಧ್ಯಯನದ ಜತೆ ಅಳವಡಿಕೆ ಆಗಬೇಕು ಎಂದರು. ಗೋಷ್ಠಿಯಲ್ಲಿ ಸಂಘದ ಪ್ರಮುಖ ರಾಜೀವ ಗಾಂವಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net