ಸಿಇಟಿ ಪಠ್ಯೇತರ ಪ್ರಶ್ನೆ ಪ್ರಕರಣ: ಕೆಇಎ ಇಡಿ ಅಮಾನತಿಗೆ ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯ

New Project
Published on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ 50 ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ ಲೋಪವಾಗಿರುವುದು ಸಾಭೀತಾಗಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರನ್ನು ಅಮಾನತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಸಮಿತಿಯ ಅಧ್ಯಕ್ಷ ಬಿ.ಎನ್.ಯೋಗಾನಂದ ಅವರು, 50 ಪಠ್ಯೇತರ ಪ್ರಶ್ನೆ ಕೇಳಿರುವುದು ಸಾಭೀತಾದ ಮೇಲೂ ಸರ್ಕಾರ ಏಕೆ ಇದುವರೆಗೂ ಈ ಎಡವಟ್ಟಿಗೆ ಕಾರಣರಾದ ಒಬ್ಬ ಅಧಿಕಾರಿ ವಿರುದ್ಧವೂ ಕ್ರಮ ಕೈಗೊಂಡಿಲ್ಲ? ಸರ್ಕಾರ ರಚಿಸಿದ ಸಮಿತಿಯ ವರದಿಯಲ್ಲೇ ಲೋಪ ಸಾಭೀತಾದರೂ ಕೆಇಎ ಇಡಿ ರಮ್ಯಾ ಅವರು ಮಾತ್ರ ನಿಯಮ ಪ್ರಕಾರವೇ ಸಿಇಟಿ ಪರೀಕ್ಷೆ ನಡೆಸಲಾಗಿದೆ ಎಂದು ಉದ್ಧಟತನದ ಹೇಳಿಕೆ ನೀಡಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡಿದ್ದಾರೆ. ಪರೀಕ್ಷೆ ನಿಯಮಾನುಸಾರ ನಡೆದಿದ್ದರೆ ವಿದ್ಯಾರ್ಥಿಗಳು, ಉಪನ್ಯಾಸಕರು ಮಾಡಿದ ಆರೋಪ, ಸರ್ಕಾರ ರಚಿಸಿದ ಸಮಿತಿ ನೀಡಿದ ವರದಿ, ವರದಿ ಆಧರಿಸಿ ಸರ್ಕಾರ 50 ಪಠ್ಯೇತರ ಪ್ರಶ್ನೆ ಕೈಬಿಟ್ಟು ಮೌಲ್ಯಮಾಪನ ಮಾಡಲು ಮಾಡಿದ ಆದೇಶ ಎಲ್ಲವೂ ವ್ಯರ್ಥವೇ? ಎಂದು ಪ್ರಶ್ನಿಸಿದ್ದಾರೆ.

ರಮ್ಯಾ ಅವರ ವಿರುದ್ಧ ಸರ್ಕಾರ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣದ ತನಿಖೆ ಏನಾಯಿತು? ಪಿಎಸ್‌ಐ ಪರೀಕ್ಷೆಯಲ್ಲಿ ಸೇವೆಯಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದೇಕೆ? ವೈದ್ಯಕೀಯ ಸೀಟು ಹಂಚಿಕೆಯಲ್ಲಿ ಹೈಕೋರ್ಟ್ ಪ್ರಾಧಿಕಾರಕ್ಕೆ ಎರಡು ಬಾರಿ ಒಟ್ಟು 6 ಲಕ್ಷ ರು. ದಂಡ ವಿಧಿಸಿದೆ. ಈಗ ಸಿಇಟಿ ಗೊಂದಲ ದೊಡ್ಡ ಸದ್ದು ಮಾಡಿದೆ. ಇಷ್ಟೆಲ್ಲಾ ಆದರೂ ಸರ್ಕಾರ ಅವರ ವಿರುದ್ಧ ತನಿಖೆ ನಡೆಸದೆ, ಅವರನ್ನೇ ಕೆಇಎ ಉನ್ನತ ಹುದ್ದೆಯಲ್ಲಿ ಮುಂದುವರೆಸಿರುವುದು ನೋಡಿದರೆ ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ. ಈಗಲಾದರೂ ಉನ್ನತ ಶಿಕ್ಷಣ ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ರಮ್ಯಾ ಅವರನ್ನು ಅಮಾನತಿನಲ್ಲಿಟ್ಟು ಸಿಇಟಿ ಗೊಂದಲದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net