

ಕುದೂರು : ಅಪರಾಧಗಳಿಗೆ ಕಡಿವಾಣ ಹಾಕಬೇಕಾದರೆ ಪೊಲೀಸರೊಂದಿಗೆ ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಕುದೂರು ಠಾಣೆಯ ಇನ್‌ಸ್ಪೆಕ್ಟರ್ ನವೀನ್ ತಿಳಿಸಿದರು.
ತಿಪ್ಪಸಂದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸುಳಿವು ಸಿಕ್ಕಲ್ಲಿ ಠಾಣೆಗೆ ಮಾಹಿತಿ ನೀಡಿದರೆ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಾಧ್ಯ ಎಂದರು.
ತಿಪ್ಪಸಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಆವರಣ, ಮಾರುತಿ ಕ್ರೀಡಾಂಗಣದ ಒಳಗೆ ಮದ್ಯಪಾನ ಮಾಡುತ್ತಿರುವ ವಿಚಾರ ಶಾಲಾ ಹಾಗೂ ಆಸ್ಪತ್ರೆ ಮುಖ್ಯಸ್ಥರು ಪತ್ರದ ಮೂಲಕ ಮನವಿ ಸಲ್ಲಿಸಿದ್ದು, ಇದನ್ನು ತಡೆಗಟ್ಟಲು ಪೊಲೀಸ್ ಬೀಟ್ ಮತ್ತು ವಿಶೇಷ ತಂಡ ರಚಿಸುವ ಕೆಲಸ ಮಾಡಲಿದ್ದೇವೆ. ಮದ್ಯವ್ಯಸನಿಗಳು ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರ ಕೈಗೆ ಸಿಕ್ಕರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ದೇವರಾಜು ಮಾತನಾಡಿ, ಶಾಲೆಯ ಹಿಂಬದಿಯಲ್ಲಿ ನಿತ್ಯ ಮದ್ಯಾರಾಧನೆ ನಡೆಯುತ್ತಿದೆ. ಆಸ್ಪತ್ರೆಗಳ ಕಿಟಕಿಗಳನ್ನು ಒಡೆದು ಹಾಕಲಾಗಿದೆ. ಮಕ್ಕಳು ಶಾಲಾ ಗ್ರಾಮಸಭೆಯಲ್ಲಿ ಕುಡುಕರ ಹಾವಳಿ ತಪ್ಪಿಸಿ ಎಂದು ಮನವಿ ಮಾಡುತ್ತಿರುವುದು, ಆಡಳಿತದ ಕಾರ್ಯವೈಖರಿ ಪ್ರಶ್ನಿಸುವಂತಿದೆ. ಪೊಲೀಸ್ ಅಧಿಕಾರಿಗಳು ಗಮನಹರಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.