

ಕೋಟ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಸಂಸ್ಥೆಯ ಕಾರ್ಯಚಟುವಟಿಕೆಯನ್ನು, ಬೆಳವಣಿಗೆಯನ್ನು ಕಂಡ ಪ್ರತ್ಯಕ್ಷ ಸಾಕ್ಷಿ ನಾನು. ಸದಾನಂದ ಹೆಬ್ಬಾರ ಹಾಗೂ ನಾರ್ಣಪ್ಪ ಉಪ್ಪೂರರ ಭವ್ಯ ಕನಸಿನ ಕೂಸಿದು. ಭಾಗವತಿಕೆಯಲ್ಲಿ ಶ್ರೇಷ್ಠರೆನಿಸಿದ ಕಾಳಿಂಗ ನಾವಡ, ಧಾರೇಶ್ವರರಂತಹ ಸಾವಿರಾರು ಕಲಾವಿದರನ್ನು ಯಕ್ಷ ಪ್ರಪಂಚಕ್ಕೆ ನೀಡಿದ ಸಂಸ್ಥೆ ಎಂದು ಸಾಸ್ತಾನ ಎಡಬೆಟ್ಟಿನ ಧಾರ್ಮಿಕ ಮುಂದಾಳು ವೆಂಕಪ್ಪಯ್ಯ ಭಟ್ಟ ಹೇಳಿದರು.
ಇತ್ತೀಚಿಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಆಯೋಜಿಸಲಾದ ಯಕ್ಷ ತ್ರಿಕೂಟ ಸಂಭ್ರಮದ ಕೊನೆಯ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಕ್ಷ ಸರಣಿ ಕಾರ್ಯಕ್ರಮಗಳು, ಸಪ್ತಾಹಗಳು, ಭಾಗವತಿಕೆ, ಮದ್ದಲೆ ಚೆಂಡೆಯ ನಿರಂತರ ತರಗತಿಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಇದೀಗ ತ್ರಿಕೂಟ ಯಕ್ಷ ಸಂಭ್ರಮದಲ್ಲಿ ಸಂಸ್ಥೆ ನೀಡುತ್ತಿರುವ ಯಕ್ಷಗಾನ ಪ್ರಸಂಗ ಅಪರೂಪದ್ದು, ಈ ಪ್ರದರ್ಶನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಉಪಸ್ಥಿತರಿದ್ದರು. ರಾಘವೇಂದ್ರ ಮಯ್ಯ ಸ್ವಾಗತಿಸಿದರು. ಗಣೇಶ್ ಆಚಾರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕಲಾಕೇಂದ್ರದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.