

ಪಿರಿಯಾಪಟ್ಟಣ: ಸುಮಾರು 70 ವರ್ಷಗಳ ಇತಿಹಾಸ ಹೊಂದಿರುವ ತಾಲೂಕಿನ ಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆಲ ವರ್ಷಗಳಿಂದ ಕಾಂಪೌಂಡ್ ಕಾಮಗಾರಿ ಪೂರ್ಣಗೊಳ್ಳದೆ ಅನೈತಿಕ ಚಟುವಟಿಕೆ ತಾಣವಾಗಿದೆ.
ತಾಲೂಕಿನ ಮುತ್ತೂರು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಲಿಂಗಾಪುರ ಗ್ರಾಮ ಬಹುತೇಕ ಕೊಡಗಿನ ವಾತಾವರಣವನ್ನೇ ಹೊಂದಿದೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಿದ್ದು, ಅಕ್ಕಪಕ್ಕದ ಗ್ರಾಮಗಳಾದ ಲಿಂಗಾಪುರ ಕಾಲನಿ, ಆಯರಬೀಡು, ಕಿರಂಗೂರು ಗ್ರಾಮಗಳಿಗಾಗಿ 1956ರಲ್ಲಿಯೇ ಸರ್ಕಾರಿ ಶಾಲೆ ತೆರೆಯಲಾಗಿದೆ.
ಆಯರಬೀಡು ಗ್ರಾಮದಲ್ಲಿ ಬಹುತೇಕ ಅಲ್ಪಸಂಖ್ಯಾತ ಮಕ್ಕಳು, ಲಿಂಗಾಪುರ ಕಾಲನಿ ಗಿರಿಜನ ಮಕ್ಕಳು, ಕಿರಂಗೂರು ಮತ್ತು ಲಿಂಗಾಪುರ ಸೇರಿದಂತೆ ಒಟ್ಟು ನಾಲ್ಕು ಗ್ರಾಮಗಳ ವಿದ್ಯಾರ್ಥಿಗಳಿಗೆ ಇದೊಂದೇ ಸರ್ಕಾರಿ ಶಾಲೆಯಾಗಿದೆ. ಈ ಸರ್ಕಾರಿ ಶಾಲೆಯ ಒಂದೆರಡು ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ಮಕ್ಕಳು ಶಾಲೆಗೆ ಕಲಿಯಲು ಬರುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 55 ವಿದ್ಯಾರ್ಥಿಗಳು ಇದ್ದು, ಮುಖ್ಯಶಿಕ್ಷಕರಾಗಿ ಎಸ್.ಆರ್.ಅನಂತ್, ಸಹ ಶಿಕ್ಷಕರಾಗಿ ಎಂ.ಶ್ರೀನಿವಾಸ್ ಮತ್ತು ಪಿ.ರೋಹಿತ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅರಣ್ಯದಂಚಿನಲ್ಲಿರುವ ಗ್ರಾಮಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 1956ರಲ್ಲಿ ಗ್ರಾಮದ ನಿವಾಸಿ ಚೇರಂಡ.ಎನ್.ಮಾದಪ್ಪ ಎಂಬ ದಾನಿಗಳು ಶಾಲೆಗೆ ಉದಾರವಾಗಿ 10 ಎಕರೆ ಜಮೀನನ್ನು ದಾನವಾಗಿ ನೀಡಿದ್ದು, ಮುಖ್ಯ ರಸ್ತೆಯ ಒಂದು ಬದಿಯಲ್ಲಿನ ಒಂದು ಎಕರೆ ಪ್ರದೇಶದಲ್ಲಿ ಶಾಲೆ ನಿರ್ಮಾಣವಾಗಿದ್ದರೆ, ಮತ್ತೊಂದು ಬದಿಯಲ್ಲಿ ಇರುವ 9 ಎಕರೆ ಜಮೀನನ್ನು ಶಾಲೆಗೆ ಮೀಸಲಿಡಲಾಗಿದೆ.
ಒಂದರಿಂದ ಏಳನೇ ತರಗತಿವರೆಗಿರುವ ಈ ಶಾಲೆಯಲ್ಲಿ ಪ್ರಾರಂಭದಲ್ಲಿ ಮೂರು ಕೊಠಡಿಗಳನ್ನು ಮಾತ್ರ ನಿರ್ಮಿಸಲಾಗಿತ್ತು. ನಂತರದ ದಿನಗಳಲ್ಲಿ ಹೆಚ್ಚುವರಿಯಾಗಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಇದೀಗ ಒಟ್ಟು ಐದು ಕೊಠಡಿಗಳನ್ನು ಹೊಂದಿದೆ. ಶಾಲೆಗೆ ದಾನವಾಗಿ ನೀಡಿರುವ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ಚಟುವಟಿಕೆಗೆ ನೀಡಲಾಗುತ್ತಿದ್ದು, ಅದರಿಂದ ಬರುವ ಹಣವನ್ನು ಶಾಲೆಯ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ.
ಶಾಲೆಯ ಆವರಣದಲ್ಲಿ ಬಿಸಿಯೂಟದ ಭೋಜನ ಮಂದಿರ ನಿರ್ಮಾಣ ಮಾಡಿರುವುದು, ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಿರುವುದು, ಶೌಚಗೃಹಗಳ ನಿರ್ವಹಣೆ, ಶಾಲಾ ಕೊಠಡಿಗಳಿಗೆ ನಿಯಮಿತವಾಗಿ ಸುಣ್ಣ ಬಣ್ಣ ಹೊಡೆಸುವುದು, ಶಾಲೆಯ ಜಮೀನಿಗೆ ತಂತಿ ಬೇಲಿ ನಿರ್ಮಾಣ, ಆಟೋಟಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸುವುದು ಸೇರಿದಂತೆ ವಿವಿಧ ಚಟುವಟಿಕೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೆ ಈ ಹಣವನ್ನೇ ವಿನಿಯೋಗಿಸಲಾಗುತ್ತಿದೆ. ಶಾಲೆಯ ಆವರಣದಲ್ಲಿ ಸುಂದರ ಕೈತೋಟವನ್ನು ನಿರ್ಮಿಸಿ ಹಣ್ಣು, ತರಕಾರಿಗಳನ್ನೂ ಬೆಳೆಯಲಾಗುತ್ತಿದೆ. ತೆಂಗು, ಮಾವು, ಸಪೋಟ, ರಾಮಫಲ, ಪಪ್ಪಾಯ, ನೆಲ್ಲಿಕಾಯಿ ಸೇರಿದಂತೆ ವಿವಿಧ ಜಾತಿಯ ಮರಗಳು ಇಲ್ಲಿದ್ದು, ದೊಡ್ಡ ದೊಡ್ಡ ಹೊಂಗೆ ಮರಗಳು ಶಾಲೆಯ ಆವರಣವನ್ನು ಸದಾ ತಂಪಾಗಿರಿಸಿವೆ.
ಎಪ್ಪತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಶಾಲಾ ಕಟ್ಟಡ ಮಳೆಗಾಲದ ಸಂದರ್ಭದಲ್ಲಿ ಎಡೆಬಿಡದೆ ಸುರಿಯುವ ಜಡಿ ಮಳೆಗೂ ಜಗ್ಗದೆ ಕುಗ್ಗದೆ ಇನ್ನೂ ಗಟ್ಟಿ ಮುಟ್ಟಾಗಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಶಾಲೆಯ ಶಿಕ್ಷಕರ ಕರ್ತವ್ಯ ಕ್ಷಮತೆ ಮತ್ತು ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಚೇರಂಡ.ಎಂ.ಕಾಳಯ್ಯ (ಶಾಲೆಗೆ ಸ್ಥಳ ದಾನ ನೀಡಿರುವ ದಿ.ಚೇರಂಡ.ಎನ್.ಮಾದಪ್ಪ ಅವರ ಪುತ್ರ) ಕಾಳಜಿ ಎಂದರೆ ತಪ್ಪಾಗಲಾರದು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕೆಂದು ಉದ್ದೇಶದಿಂದ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಅದಕ್ಕೆ ಅಗತ್ಯವಿರುವ ಲ್ಯಾಪ್‌ಟಾಪ್, ಪ್ರಿಂಟರ್, ಟಿವಿ ಖರೀದಿಸಲಾಗಿದ್ದು ಕೊಠಡಿಗಳ ನವೀಕರಣ ಕೆಲಸವೂ ನಡೆಯುತ್ತಿದೆ.
ಮೂರು ವರ್ಷಗಳ ಹಿಂದೆ ಶಿಥಿಲಗೊಂಡಿದ್ದ ಶಾಲೆಯ ಕಾಂಪೌಂಡ್ ನೆಲಸಮಗೊಳಿಸಿ ಹೊಸ ಕಾಂಪೌಂಡ್ ನಿರ್ಮಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಶಾಲೆಯ ಮೂರು ಬದಿಯ ಕಾಂಪೌಂಡನ್ನು ನೆಲಸಮಗೊಳಿಸಿದ ಗುತ್ತಿಗೆದಾರರು ಎರಡು ಬದಿಯಲ್ಲಿ ಮಾತ್ರ ಕಾಂಪೌಂಡ್ ನಿರ್ಮಿಸಿ, ಗುತ್ತಿಗೆದಾರ ಮತ್ತು ಇಂಜಿನಿಯರ್ ನಡುವಿನ ಸಮನ್ವಯದ ಕೊರತೆಯಿಂದಾಗಿ ಮತ್ತೊಂದು ಬದಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡದೆ ಹಾಗೆಯೇ ತೆರಳಿದ್ದಾರೆ. ಇದರಿಂದಾಗಿ ಶಾಲೆಗೆ ಯಾವುದೇ ರೀತಿಯ ರಕ್ಷಣೆ ಇಲ್ಲದಿರುವುದರಿಂದ ರಜಾ ದಿನಗಳಲ್ಲಿ ಮತ್ತು ರಾತ್ರಿ ಸಮಯದಲ್ಲಿ ಶಾಲೆಯ ಆವರಣವು ಪುಂಡ ಪೋಕರಿಗಳ ತಾಣವಾಗಿದೆ. ಕಳೆದ ವರ್ಷ ಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವ ದುಷ್ಕರ್ಮಿಗಳು ಮಕ್ಕಳ ಬಿಸಿಯೂಟಕ್ಕೆ ಇದ್ದ ಗ್ಯಾಸ್ ಸಿಲಿಂಡರನ್ನು ಕದ್ದೊಯ್ದಿದ್ದಾರೆ. ಕಳ್ಳ ಕಾಕರ ಭಯದಿಂದಾಗಿ ಬೆಲೆಬಾಳುವ ವಸ್ತುಗಳನ್ನು ಶಾಲೆಯಲ್ಲಿ ಬಿಟ್ಟು ಹೋಗಲು ಸಾಧ್ಯವಾಗುತ್ತಿಲ್ಲ ಎಂಬುದು ಮುಖ್ಯ ಶಿಕ್ಷಕರ ಅಳಲಾಗಿದೆ.
ಕಾಡಂಚಿನಲ್ಲಿಯೇ ಈ ಶಾಲೆ ಇರುವುದರಿಂದ ರಾತ್ರಿ ವೇಳೆಯಲ್ಲಿ ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಶಾಲಾ ಆವರಣದಲ್ಲಿ ಬೆಳೆಯಲಾಗಿದ್ದ ಕೈತೋಟವನ್ನು ನಾಶಪಡಿಸಿವೆ.
ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಇತ್ತ ಗಮನಹರಿಸಿ ಅಪೂರ್ಣಗೊಂಡಿರುವ ಶಾಲಾ ಕಾಂಪೌಂಡನ್ನು ಸಂಪೂರ್ಣಗೊಳಿಸಬೇಕು, ಸುಸಜ್ಜಿತವಾದ ಗೇಟ್ ಅಳವಡಿಸಬೇಕು, ಕೊಠಡಿಯ ಬಾಗಿಲುಗಳಿಗೆ ಕಬ್ಬಿಣದ ಜಾಲರಿ ಅಳವಡಿಸುವ ಕೆಲಸವಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.