ಸಮುದಾಯಕ್ಕೆ ಮಠಾಧೀಶರ ಮಾರ್ಗದರ್ಶನ ಅವಶ್ಯ

kkp
Published on

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಉಮಾಶಂಕರ್​ ಅನಿಸಿಕೆ

ಕನಕಪುರ: ತಾಲೂಕಿನಲ್ಲಿ ವೀರಶೈವ ಲಿಂಗಾತತರು ಒಟ್ಟಾಗಿ ಸಮುದಾಯ ಮುನ್ನಡೆಸಲು ಮಠಾಧೀಶರ ಮಾರ್ಗದರ್ಶನ, ಸಲಹೆ, ಸಹಕಾರ ಅವಶ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಉಮಾಶಂಕರ್​ ಹೇಳಿದರು.

ತಾಲೂಕಿನ ಕೊಳಗೊಂಡನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಡಿನಾಡು ಅಖಿಲಭಾರತ ವೀರಶೈವ ಲಿಂಗಾಯತ ಸಮಾಗಮದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ವೀರಶೈವ&ಲಿಂಗಾಯತ ಸಮಾಜದ ಏಳಿಗೆಗೆ ಸ್ಪಂದನೆ ಸಿಗುತ್ತಿಲ್ಲ. ವೀರಶೈವ ಪರಂಪರೆಯನ್ನು ರಸಿ, ಮುಂದುವರಿಸಿಕೊಂಡು ಹೋಗಲು ಪೀಠಾಧೀಶರ ಮಾರ್ಗದರ್ಶನ ಬೇಕು ಎಂದರು.

ಆನೇಕಲ್​ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಹೀಲಕ್ಕಿ ಜಯಣ್ಣ ಮಾತನಾಡಿ, ತಾಲೂಕು ಹಾಗೂ ತಮಿಳುನಾಡು ಗಡಿ ಭಾಗದ ವೀರಶೈವರ ಸಮಾಗಮವು ಸಮುದಾಯದ ಸಮಸ್ಯೆ ಚರ್ಚಿಸಲು ಮತ್ತು ಒಮ್ಮತಕ್ಕೆ ಬರಲು ಅವಕಾಶ ನೀಡುತ್ತದೆ. ಸಮಾಜದವರು ಬಸವಣ್ಣನವರ ಇಷ್ಟಲಿಂಗ ಪೂಜೆ ಮುಂದುವರಿಸಬೇಕು. ಆಗಲೇ ಸಮುದಾಯ ಗಟ್ಟಿಯಾಗಲಿದೆ ಎಂದರು.

ಅಖಿಲ ಭಾರತ ವೀರಶೈವ ಸಮಾಜದ ತಾಲೂಕು ನಿರ್ದೇಶಕ ಅರ್ಜುನಹಳ್ಳಿ ಪ್ರಸಾದ್​ ಮಾತನಾಡಿ, ವೀರಶೈವ ಲಿಂಗಾಯತ ಧರ್ಮವು ವಿವಿಧ ಜಾತಿ, ಉಪಜಾತಿಗಳೆಲ್ಲ ಕೂಡಿ ಹೆಮ್ಮರವಾಗಿದೆ. ಎಲ್ಲರನ್ನೂ ಒಗ್ಗೂಡಿಸಲು ತಾಲೂಕಿನಲ್ಲಿ ಗ್ರಾಮಮಟ್ಟದ ಜನಗಣತಿ ಮಾಡಬೇಕು ಎಂದರು.

ನೂರೊಂದು ಸ್ವಾಮಿ ಬೆಟ್ಟದ ಶ್ರೀಸದಾಶಿವ ಸ್ವಾಮೀಜಿ, ಕೃಷ್ಣಗಿರಿ ಜಿಲ್ಲೆ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಸಿ.ಎಂ.ಗೌಡ, ಮುಖಂಡರಾದ ಬಿಳಿದಾಳೆ ಪರಮೇಶ್​, ವೀರಯ್ಯನದೊಡ್ಡಿ ವೀರಯ್ಯ, ಆನೇಕಲ್​ ತಾಲೂಕು ಮಾಜಿ ಅಧ್ಯಕ್ಷ ಮಹೇಶ್​, ಬಸವಣ್ಣ ಹಾಗೂ ಇತರರಿದ್ದರು.

ಪರಂಪರೆ ರಕ್ಷಣೆಗೆ ಸಂಕಲ್ಪ ಮಾಡಿಉರುಬರಾಣಿ ಮಠದ ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಪರಂಪರೆ ರಕ್ಷಣೆ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಎಲ್ಲದಕ್ಕೂ ಪೀಠವನ್ನೇ ಅವಲಂಬಿಸಬಾರದು. ಗುರು ಮತ್ತು ಶಿಷ್ಯರ ಉತ್ತಮ ಸಂಬಂಧದಿಂದ ಧರ್ಮ ಪ್ರಚಾರವಾಗುತ್ತದೆ. ನಾವು ವೀರಶೈವ ಧರ್ಮ ಪರಂಪರೆಯನ್ನು ಭದ್ರವಾಗಿಸಿಕೊಂಡು ಸಮಾಜದ ರಕ್ಷಣೆ ಮಾಡಬೇಕು. ಇದರಲ್ಲಿ ಮಠಾಧೀಶರು, ವೀರಶೈವ ಸಮುದಾಯ ಒಟ್ಟಾಗಿ ನಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net