

ಹಾವೇರಿ: ಡಿ. 27ರಂದು ನಡೆಯುವ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಪ್ರಚಾರ ಹಾಗೂ ಮತಯಾಚನೆಗೆ ಇನ್ನೆರಡೇ ದಿನ ಮಾತ್ರ ಅವಕಾಶವಿದ್ದು, ಅಭ್ಯರ್ಥಿಗಳು ಮತದಾರರಿಗೆ ಚಿಹ್ನೆ ಮನದಟ್ಟು ಮಾಡುವುದೇ ಹರಸಾಹಸದ ಕೆಲಸವಾಗಿದೆ.
ಶಿಗ್ಗಾಂವಿ, ಸವಣೂರ, ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕುಗಳ 105 ಗ್ರಾಪಂಗಳಲ್ಲಿ 1,461 ಸದಸ್ಯ ಸ್ಥಾನಗಳಲ್ಲಿ 75 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 1,383 ಸದಸ್ಯರ ಆಯ್ಕೆಗೆ ಡಿ. 27ರಂದು ಮತದಾನ ನಡೆಯಲಿದೆ. ಇದರಲ್ಲಿ 46 ಏಕ ಸದಸ್ಯ, 120 ದ್ವಿ ಸದಸ್ಯ, 223 ತ್ರಿ ಸದಸ್ಯ, 125 ನಾಲ್ಕು ಸದಸ್ಯರ ವಾರ್ಡ್ಗಳಿವೆ. ಏಕ ಸದಸ್ಯ ವಾರ್ಡ್ಗಳಲ್ಲಿ ಒಬ್ಬ ಮತದಾರ ಒಂದೇ ಮತ ಚಲಾಯಿಸಲಿದ್ದು, ಅಲ್ಲಿ ತಮಗೆ ಯೋಗ್ಯರೆನಿಸುವ ಒಬ್ಬ ಅಭ್ಯರ್ಥಿಯ ಚಿಹ್ನೆ ನೆನಪಿಟ್ಟುಕೊಂಡರೆ ಸಾಕು. ಆದರೆ, 2, 3, ಹಾಗೂ 4 ಸದಸ್ಯರಾಯ್ಕೆಯ ಬಹು ಸದಸ್ಯ ವಾರ್ಡ್ಗಳಲ್ಲಿ ಸದಸ್ಯರ ಸ್ಥಾನಕ್ಕೆ ಅನುಗುಣವಾಗಿ ಮತ ಚಲಾಯಿಸಬೇಕು. ನಾಲ್ಕು ಜನ ಸದಸ್ಯರ ಆಯ್ಕೆಯ ವಾರ್ಡ್ಗಳಲ್ಲಿ ನಾಲ್ಕು ಮತಗಳನ್ನು ಚಲಾಯಿಸಬೇಕಿದ್ದು, ಅಲ್ಲಿ ಆಯ್ಕೆ ಬಯಸಿ 12ರಿಂದ 20 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇಷ್ಟು ಜನರಲ್ಲಿ ತಮಗೆ ಸೂಕ್ತವೆನಿಸುವ ನಾಲ್ಕು ಜನರ ಚಿಹ್ನೆಯನ್ನು ಆಯ್ಕೆ ಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿರುವ ಅನಕ್ಷರಸ್ಥರಿಗೆ, ಮಹಿಳೆಯರಿಗೆ ಮನವರಿಕೆ ಮಾಡಿಕೊಟ್ಟು ಅವುಗಳನ್ನು ಅವರು ಮತ ಚಲಾಯಿಸುವವರೆಗೂ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವುದೇ ಅಭ್ಯರ್ಥಿಗಳಿಗೆ ದೊಡ್ಡ ಸವಾಲಾಗಿದೆ.
ಕರಪತ್ರಕ್ಕೂ ಸಮಸ್ಯೆ: ಡಿ. 27ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳಿಗೆ ಡಿ. 19ರ ಸಂಜೆ ಅಧಿಕೃತ ಚಿಹ್ನೆ, ಬ್ಯಾಲೆಟ್ ಪೇಪರ್ನ ಮಾದರಿಯನ್ನು ಆಯೋಗದಿಂದ ನೀಡಬೇಕಿತ್ತು. ಆದರೆ, ಕೆಲಕಡೆಗಳಲ್ಲಿ ಅತಿಹೆಚ್ಚು ನಾಮಪತ್ರ ಸಲ್ಲಿಕೆ ಹಾಗೂ ಚುನಾವಣಾ ಅಧಿಕಾರಿಗಳ ವಿಳಂಬದಿಂದ 19ರಂದು ಚಿಹ್ನೆ ಹಾಗೂ ಬ್ಯಾಲೆಟ್ ಪೇಪರ್ನ ಮಾದರಿ ಸಿಕ್ಕಿಲ್ಲ. ಡಿ. 20ರಂದು ಎಲ್ಲ ಕಡೆಗಳಲ್ಲಿ ಚಿಹ್ನೆ, ಬ್ಯಾಲೆಟ್ ಪೇಪರ್ನ ಮಾದರಿ ಲಭ್ಯವಾಗಿವೆ. ಅಂದೇ ಎಲ್ಲ ಅಭ್ಯರ್ಥಿಗಳು ಕರಪತ್ರಗಳನ್ನು ಮುದ್ರಿಸಲು ಪ್ರಿಂಟಿಂಗ್ ಪ್ರೆಸ್ಗಳಿಗೆ ಧಾವಿಸಿದ್ದರು. ಕರೊನಾ ಲಾಕ್ಡೌನ್ನಿಂದಾಗಿ ಅನೇಕ ಪ್ರಿಂಟಿಂಗ್ ಪ್ರೆಸ್ಗಳು ಸುಸಜ್ಜಿತವಾದ ಯಂತ್ರಗಳನ್ನು ಅಳವಡಿಸಿಕೊಂಡಿಲ್ಲ. ಹಳೆಯ ಯಂತ್ರಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಸ್ಥಳೀಯ ತಾಲೂಕು ಕೇಂದ್ರಗಳಲ್ಲಿರುವ ಪ್ರಿಂಟಿಂಗ್ ಪ್ರೆಸ್ಗಳನ್ನು ಆಯೋಗವು ಬ್ಯಾಲೆಟ್ ಮುದ್ರಿಸಲು ವಶಪಡಿಸಿಕೊಂಡಿದೆ. ಹೀಗಾಗಿ ಸಾವಿರಾರು ಸಂಖ್ಯೆಯ ಅಭ್ಯರ್ಥಿಗಳು ಕರಪತ್ರ ಮುದ್ರಿಸಿಕೊಂಡಿರುವುದೇ ಡಿ. 21 ಹಾಗೂ 22ರಂದು. ‘ಡಿ. 23ರಿಂದ ಕರಪತ್ರಗಳನ್ನು ಹಿಡಿದು ಪ್ರಚಾರ ಆರಂಭಿಸಿದ್ದೇವೆ. ಕೇವಲ ನಾಲ್ಕು ದಿನಗಳಲ್ಲಿ ನಮ್ಮ ಚಿಹ್ನೆಗಳನ್ನು ಮಹಿಳೆಯರು, ವೃದ್ಧರು, ಅನಕ್ಷರಸ್ಥರಿಗೆ ಮನವರಿಕೆ ಮಾಡಿಕೊಡಲು ಸಮಸ್ಯೆಯಾಗುತ್ತಿದೆ’ ಎಂದು ಚುನಾವಣಾ ಅಖಾಡದಲ್ಲಿರುವ ಸವಣೂರ ಹಾಗೂ ಹಾನಗಲ್ಲ ತಾಲೂಕಿನ ಕೆಲ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಇದೆ. ಬೆಳಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಗ್ರಾಮೀಣ ಪ್ರದೇಶದ ಬಹಳಷ್ಟು ಜನರು ಜಮೀನು ಕೆಲಸಕ್ಕೆ ಹೋಗಿರುತ್ತಾರೆ. ಅವರೆಲ್ಲ ಸಿಗುವುದು ಸಂಜೆಯ ವೇಳೆಯಲ್ಲಿ ಮಾತ್ರ. ಹೀಗಾಗಿ ಮತದಾರರನ್ನು ಭೇಟಿಯಾಗಲು ಉಳಿದಿರುವುದು ಕೇವಲ 2 ದಿನದ ಸಂಜೆ ಅವಧಿ ಮಾತ್ರ. ಇಷ್ಟರಲ್ಲಿ ಮತದಾರರ ಮನೆಬಾಗಿಲಿಗೆ ಹೋಗಿ ಬ್ಯಾಲೆಟ್ ಮಾದರಿಯ ಕರಪತ್ರದಲ್ಲಿರುವ ತಮ್ಮ ಚಿಹ್ನೆಯನ್ನು ತಿಳಿಸಿ ಅದಕ್ಕೆ ಮತ ನೀಡಬೇಕು ಎಂದು ಮನವೊಲಿಸಬೇಕಿದೆ. ಸಮಯದ ಮಿತಿಯಿಂದಾಗಿ ಒಂದು ದಿನಕ್ಕೆ 30ರಿಂದ 40ಮನೆಗಳನ್ನು ಭೇಟಿ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಕುರುಬರಮಲ್ಲೂರಿನ ಅಭ್ಯರ್ಥಿ ಅನಿಲಕುಮಾರ ಹೊಂಬಳದ.
ಜಿಲ್ಲೆಯ ಅತಿದೊಡ್ಡ ಗ್ರಾಪಂ ಆಗಿರುವ ಅಕ್ಕಿಆಲೂರಿನಲ್ಲಿ 9 ವಾರ್ಡ್ ನಲ್ಲಿ 31 ಸದಸ್ಯರ ಆಯ್ಕೆ ನಡೆಯಬೇಕಿದೆ. ಎಲ್ಲವೂ ಬಹುಸದಸ್ಯರ ಆಯ್ಕೆಯ ವಾರ್ಡ್ಗಳು. ಒಂದು ವಾರ್ಡ್ನಲ್ಲಿ ನಾಲ್ಕು ಸದಸ್ಯರಾಯ್ಕೆಗೆ 19 ಜನ ಸ್ಪರ್ಧಿಸಿದ್ದಾರೆ. ಅದರಲ್ಲಿ ನಾಲ್ಕು ಜನರ ಚಿಹ್ನೆಗಳನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. 19 ಜನರು ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ. ಇದರಿಂದ ಗೊಂದಲ ಉಂಟಾಗಿ ಎಲ್ಲಿ ನಮ್ಮ ಚಿಹ್ನೆ ಮರೆತು ಬಿಡುತ್ತಾರೆ ಎಂಬ ಆತಂಕವಿದೆ. ಹೀಗಾಗಿ ಪ್ರತಿ ಮನೆಗೂ ಹಲವು ಬಾರಿ ಭೇಟಿ ನೀಡಿ ಚಿಹ್ನೆಗಳ ಬಗ್ಗೆ ತಿಳಿಸುವುದು ಅಲ್ಪ ಸಮಯದಲ್ಲಿ ಅಭ್ಯರ್ಥಿಗಳಿಗೆ ಸವಾಲಾಗಿದೆ.| ಡಾ. ಪ್ರಕಾಶಗೌಡ ಪಾಟೀಲ, ಅಕ್ಕಿಆಲೂರ ಮುಖಂಡ
EndFragment