ಬಂಡಿದಾರಿಯೇ ಹೆದ್ದಾರಿ!

Published on

ಬಹುತೇಕ ಸರ್ಕಾರಿ ಸವಲತ್ತುಗಳಿಂದ ದೂರವಿರುವ ವಾರಹುಣಸೇನಹಳ್ಳಿ | ಗುಂಡಿಮಯ ಮಾರ್ಗದಲ್ಲೇ ನಿತ್ಯ ಸಂಚಾರ

ಶಶಿಕುಮಾರ್​ ಎ. ಶಿಡ್ಲಟ್ಟ

ತಾಲೂಕಿನ ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಪ್ಪನಹಳ್ಳಿಯಿಂದ ವಾರಹುಣಸೇನಹಳ್ಳಿ ರಸ್ತೆ ಸೇರಿ ಅಗತ್ಯ ಸೌಕರ್ಯ ಕಾಣುವಲ್ಲಿ ಹಿಂದುಳಿದಿದೆ.

ಶಿಡ್ಲಟ್ಟ ಕೇಂದ್ರ ಸ್ಥಾನದಿಂದ ಸುಮಾರು 10 ಕಿ.ಮೀ. ದೂರವಿರುವ ವಾರಹುಣಸೇನಹಳ್ಳಿ ಗ್ರಾಮ ರಸ್ತೆ ಸಮಸ್ಯೆ ಒಂದೇ ಅಲ್ಲ, ಸಾರಿಗೆ ಸೇರಿ ಅಗತ್ಯ ಮೂಲ ಸೌಕರ್ಯ ಈವರೆಗೂ ಕಂಡಿಲ್ಲ.

ಕಳೆದ ಎರಡು ತಲೆಮಾರಿನ ಇಲ್ಲಿನ ಜನ ರಸ್ತೆ ಇಲ್ಲದೆ ಕಾಲು ದಾರಿಯಲ್ಲೇ ನಡೆದಾಡುತ್ತಾ ಜೀವನ ದೂಡುತ್ತಿದ್ದಾರೆ. ನಮ್ಮ ಕಾಲಕ್ಕೆ ಉತ್ತಮ ರಸ್ತೆ ಆಗುವುದಿಲ್ಲ ಎಂಬ ನಂಬಿಕೆ ಅವರ ಮನದಲ್ಲಿ ಬಲವಾಗಿ ಬೇರೂರಿದೆ. ನಮ್ಮ ಕಾಲವಂತೂ ಮುಗಿಯುತ್ತಾ ಬಂತು, ನಮ್ಮ ಮಕ್ಕಳಾದರೂ ಡಾಂಬರು ರಸ್ತೆಯಲ್ಲಿ ನಡೆದಾಡುತ್ತಾರಾ? ಅದನ್ನು ನೋಡಿಯಾದರು ನೆಮ್ಮದಿಯಾಗಿ ಪ್ರಾಣ ಬಿಡಬಹುದೇ ಎಂಬ ಭಾವನೆ ಹಳ್ಳಿಯ ಹಿರಿಯರದ್ದಾಗಿದೆ.

ವಾರಹುಣಸೇನಹಳ್ಳಿ ಜನ ಶಿಡ್ಲಟ್ಟ ಕೇಂದ್ರ ಸ್ಥಾನಕ್ಕೆ ಬರುವುದಿರಲಿ, ಕನಿಷ್ಠ ಅಕ್ಕ ಪಕ್ಕದ ಗ್ರಾಮಗಳಿಗೆ ದ್ವಿಚಕ್ರ ವಾಹನಗಳಲ್ಲಿ ಹೋಗಬೇಕಾದರೂ ರಸ್ತೆ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲ. ರಸ್ತೆಯಿಡೀ ಮಣ್ಣು ಹಾಗೂ ಜಲ್ಲಿ ಕಲ್ಲುಗಳಿಂದ ಕೂಡಿದ್ದು, ಆಳವಾದ ಗುಂಡಿ ಬಿದ್ದಿವೆ. ಮಳೆ ಬಂದಾಗ ದ್ವಿಚಕ್ರ ವಾಹನವೂ ಸಂಚರಿಸುವುದು ಕಷ್ಟವಾಗಿದೆ. ಪ್ರಾಥಮಿಕ ಶಾಲೆ ಬಳಿಕ ವಿದ್ಯಾರ್ಥಿಗಳು ವೈಹುಣಸೇನಹಳ್ಳಿ ಇಲ್ಲವೇ, ಕುಂದಲಗುರ್ಕಿಯಲ್ಲಿರುವ ಸರ್ಕಾರಿ ಶಾಲೆಗೆ ಹೋಗಬೇಕು. ಗರ್ಭಿಣಿಯರು, ರೋಗಕ್ಕೆ ತುತ್ತಾದ ಜನರನ್ನು, ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಇದೇ ಗುಂಡಿ ಬಿದ್ದ ರಸ್ತೆಯಲ್ಲೇ ಬರಬೇಕು, ಅನ್ಯಮಾರ್ಗವಿಲ್ಲ ಎಂಬುದು ಸಾರ್ವಜನಿಕರ ಅಳಲು.

ಸುರತ ರಸ್ತೆ ಸಂಚಾರ ವ್ಯವಸ್ಥೆಯಾಗಲಿ

ದ್ವಿಚಕ್ರ ವಾಹನದ ಮೂಲಕ ಈ ಮಾರ್ಗದಲ್ಲಿ ಸಂಚರಿಸುವ ಜನರು ಪ್ರಾಣವನ್ನು ಕೈಯಗೈಲಿ ಹಿಡಿದು ಪ್ರಯಾಣಿಸಬೇಕು. ಯಾವ ಕ್ಷಣದಲ್ಲಿ ರಸ್ತೆ ಗುಂಡಿಗಳಿಂದ ಯಾರ ಪ್ರಾಣಕ್ಕೆ ಕುತ್ತು ಬರಲಿದೆಯೋ ಗೊತ್ತಿಲ್ಲ. ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣ ಮಾಡಿಕೊಡುವ ಜತೆಗೆ ಗ್ರಾಮಕ್ಕೆ ಸರ್ಕಾರಿ ಬಸ್​ ಸಂಚಾರ ವ್ಯವಸ್ಥೆ ಆಗಬೇಕಿದೆ ಎಂದು ಗ್ರಾಮದ ಜನರು ಒತ್ತಾಯಿಸಿದ್ದಾರೆ.

ಸ್ವಾತಂತ್ರ$್ಯ ಬಂದಾಗಿನಿಂದ ಈವರೆಗೂ ಮಾರಪ್ಪನಹಳ್ಳಿಯಿಂದ ವಾರಹುಣಸೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಂಡಿಲ್ಲ. ರಸ್ತೆಯೇ ಇಲ್ಲದ ಮೇಲೆ ಬಸ್​ ಸಂಚಾರದ ಮಾತು ಎಲ್ಲಿಂದ ಬರಬೇಕು. ಶಾಲೆಗೆ ಹೋಗುವ ಮಕ್ಕಳು ದ್ವಿಚಕ್ರ ವಾಹನ ಅವಲಂಬಿಸಬೇಕು. ಮಳೆ ಬಂದರೆ ದ್ವಿಚಕ್ರವಾಹನದಲ್ಲೂ ಸಂಚರಿಸಲಾಗಲ್ಲ. ಇವೆಲ್ಲವನ್ನೂ ಹೇಳಿಕೊಳ್ಳೋಣ ಎಂದರೆ ಈ ಗ್ರಾಮದಲ್ಲಿ ಇದುವರೆಗೂ ಒಂದೇ ಒಂದು ಗ್ರಾಮಸಭೆಯಾಗಲಿ, ಜನಸ್ಪಂದನ ಸಭೆಯಾಗಲಿ, ಸರ್ಕಾರದ ಯಾವುದೇ ಕಾರ್ಯಕ್ರಮ ನಡೆದಿಲ್ಲ. ಇದೆಲ್ಲವನ್ನು ಗಮನಿಸಿದರೆ ಸರ್ಕಾರದ ಸಂಪರ್ಕವನ್ನೇ ಇಲ್ಲಿಯ ಜನರು ಕಳೆದುಕೊಂಡಿದ್ದಾರೆ.

| ಅಜಿತ್​, ಗ್ರಾಮಸ್ಥ.

ಕುಡಿಯುವ ನೀರಿಗೇನು ಕೊರತೆಯಿಲ್ಲ, ಸರ್ಕಾರಿ ಕಿರಿಯ ಶಾಲೆ, ಅಂಗನವಾಡಿ ಇದೆ. ಬೀದಿ ದೀಪ ನಿರ್ವಹಣೆ ಪರವಾಗಿಲ್ಲ, ಚರಂಡಿ ವ್ಯವಸ್ಥೆ ಇರದ ಕಾರಣ ಗ್ರಾಮದಲ್ಲಿ ಸ್ವಚ್ಛತೆ ದೂರವಾಗಿದೆ. ರಸ್ತೆ ಪಕ್ಕದಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಮಳೆಗಾಲದಲ್ಲಿ ಓಡಾಡಲು ಕಷ್ಟ. ಬಹುತೇಕ ಸರ್ಕಾರಿ ಯೋಜನೆಗಳು ಈ ಗ್ರಾಮದ ಜನರಿಗೆ ತಲುಪಿಲ್ಲ ಎಂಬುದೇ ಬೇಸರದ ಸಂಗತಿ. ಆದರೂ ಇದ್ಯಾವುದನ್ನು ಗ್ರಾಮದ ಜನ ಕೇಳುತ್ತಿಲ್ಲ. ನಮ್ಮ ಬೇಡಿಕೆಯೇನಿದ್ದರೂ ಉತ್ತಮ ರಸ್ತೆ, ಬಸ್​ ಸೌಕರ್ಯ ಬೇಕಷ್ಟೆ.

|  ರಂಜಿತ್​ಕುಮಾರ್​, ಗ್ರಾಮಸ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net