

ಗುಡಿಬಂಡೆ: ತಾಲೂಕಿನ ಸೋಮೇಶ್ವರ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆ ಮಾಡಿ, ವಿದ್ಯಾರ್ಥಿಗಳು, ರೈತರು ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸುವ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಸೋಮೇಶ್ವರ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ತಾಲೂಕಿನ ಸೋಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸೋಮೇಶ್ವರ ಗ್ರಾಮ ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲೂಕು ಕೇಂದ್ರಗಳಿಗೆ ಸಂಪರ್ಕಿಸುವ ಕೇಂದ್ರ ಸ್ಥಾನವಾಗಿದೆ. ಈ ಗ್ರಾಮದ ಮೂಲಕವೇ ಸುತ್ತಮುತ್ತಲ ಗ್ರಾಮಗಳ ಜನರು ಸಂಚರಿಸಬೇಕಾಗಿದ್ದು, ಸೂಕ್ತ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಯಕ್ಕೆ ಸರಿಯಾಗಿ ಬಸ್ ಸೇವೆ ಒದಗಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಈ ಭಾಗದ ರೈತರು ಸಹ ಕೆಲಸ ಕಾರ್ಯಗಳಿಗಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಹೋಗಲು ಸಮಸ್ಯೆಯಾಗಿದೆ. ಬಸ್ ಸೌಲಭ್ಯವಿಲ್ಲದೆ ಆಟೋ ಮತ್ತಿತರ ಖಾಸಗಿ ವಾಹನಗಳನ್ನು ಅವಲಂಬಿಸಬೇಕಿದೆ. ಸೂಕ್ತ ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.
ನೂಕು ನುಗ್ಗಲು
ಸುತ್ತಮುತ್ತಲ 40ಕ್ಕೂ ಹೆಚ್ಚು ಗ್ರಾಮಗಳ ಜನರು ಸೋಮೇಶ್ವರದಲ್ಲಿ ಬಸ್‌ಗಾಗಿ ಕಾಯುತ್ತಾರೆ. ಮೂರ‌್ನಾಲ್ಕು ಗಂಟೆಗೊಮ್ಮೆ ಬರುವ ಬಸ್ ಹತ್ತಲು ನೂಕುನುಗ್ಗಲು ಉಂಟಾಗುತ್ತದೆ. ಅಲ್ಲದೇ, ಬಸ್ ಸೋಮೇಶ್ವರಕ್ಕೆ ಬರುವ ಮುನ್ನವೇ ಭರ್ತಿಯಾಗಿರುತ್ತದೆ. ಪ್ರತಿದಿನ ಇದೇ ಪರಿಸ್ಥಿತಿಯಿದ್ದು, ಶಾಲೆ, ಕಚೇರಿ ಮತ್ತಿತರ ಕೆಲಸಕಾರ್ಯಗಳಿಗೆ ಹೋಗುವುದು ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಸೋಮೇಶ್ವರ ಗ್ರಾಮಕ್ಕೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಶಾಲೆಗಳಿಗೆ ಹೋಗಲು ಸಮಸ್ಯೆ ಆಗುತ್ತಿದೆ, ಇಲ್ಲಿಂದ ಹೆಚ್ಚಾಗಿ ಬಾಗೇಪಲ್ಲಿ, ಚಿಕ್ಕಬಳ್ಳಾಪುರದಲ್ಲಿನ ಕಾಲೇಜಿಗೆ ಹೋಗಿಬರಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೇ ಆಟೋ ಮತ್ತಿತರ ವಾಹನಗಳನ್ನು ಆಶ್ರಿಸಬೇಕಿದೆ. ಸಂಚರಿಸುವ ಒಂದೆರಡು ಬಸ್‌ಗಳಲ್ಲೂ ಜನ ತುಂಬಿರುತ್ತಾರೆ. ಕೂಡಲೇ ಅಧಿಕಾರಿಗಳು ಸೂಕ್ತ ಬಸ್ ವ್ಯವಸ್ಥೆ ಮಾಡಿಕೊಡಬೇಕು. -ಅಭಿಲಾಷ್, ಲಕ್ಷ್ಮೀ, ಕವಿತಾ, ವಿದ್ಯಾರ್ಥಿಗಳು, ಸೋಮೇಶ್ವರ