ಶಿಥಿಲಾವಸ್ಥೆ ತಲುಪಿದ ಬಸ್ ನಿಲ್ದಾಣ

25-RNR-01A
Published on

ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಕ್ರಾಸ್ ಬಳಿಯ ಬಸ್ ನಿಲ್ದಾಣ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಪ್ರಯಾಣಿಕರು ಬಸ್​ಗಳಿಗಾಗಿ ಬಿಸಿಲಿನಲ್ಲಿ ಕಾಯ್ದು ನಿಲ್ಲುವ ಪರಿಸ್ಥಿತಿ ನಿರ್ವಣವಾಗಿದೆ.

ರಾಣೆಬೆನ್ನೂರ ನಗರದಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಚೌಡಯ್ಯದಾನಪುರ ಕ್ರಾಸ್ ಬಳಿ ಬಸ್ ನಿಲ್ದಾಣವಿದೆ. ಈ ಮಾರ್ಗವಾಗಿ ಗುತ್ತಲ, ಹೂವಿನಹಡಗಲಿ, ಬಳ್ಳಾರಿ, ಹೊಸಪೇಟೆ ಸೇರಿ ವಿವಿಧ ಜಿಲ್ಲೆಗಳ ಬಸ್​ಗಳು ಸಂಚರಿಸುತ್ತದೆ. ಚೌಡಯ್ಯದಾನಪುರ, ವೈ.ಟಿ. ಹೊನ್ನತ್ತಿ, ನರಸೀಪುರ ಸೇರಿ ವಿವಿಧ ಗ್ರಾಮಗಳ ಜನತೆ ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

ಹಲವು ವರ್ಷದ ಹಿಂದೆ ಶಾಸಕರ ಅಭಿವೃದ್ಧಿ ಯೋಜನೆಯ ಅನುದಾನದಡಿ ನಿರ್ವಿುಸಿದ ಬಸ್ ನಿಲ್ದಾಣ ಇದೀಗ ಸಂಪೂರ್ಣ ಹದಗೆಟ್ಟು ಹೋಗಿದೆ. ನಿಲ್ದಾಣದ ಮೇಲ್ಛಾವಣಿ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ನೆಲಹಾಸಿಗೆ ಹಾಕಿದ್ದ ಕಾಂಕ್ರಿಟ್ ಸಂಪೂರ್ಣ ಕಿತ್ತು ಹೋಗಿದ್ದು, ಪ್ರಯಾಣಿಕರು ನಿಂತುಕೊಳ್ಳಲು ಆಗದ ಸ್ಥಿತಿಯಿದೆ.

ಪ್ರಯಾಣಿಕರು ನಿತ್ಯವೂ ಬಸ್ ನಿಲ್ದಾಣದ ಹೊರ ಭಾಗದಲ್ಲಿ ನಿಂತುಕೊಳ್ಳಬೇಕಿದೆ. ಅಕ್ಕಪಕ್ಕದಲ್ಲಿ ಗಿಡಗಳು ಇಲ್ಲದ ಕಾರಣ ಜನತೆ ಅನಿವಾರ್ಯವಾಗಿ ಬಿಸಿಲಿನಲ್ಲಿಯೇ ನಿಂತುಕೊಳ್ಳಬೇಕಿದೆ. ಮಳೆಗಾಲದಲ್ಲಂತೂ ನಿಲ್ದಾಣ ಬಳಿ ಯಾರೂ ಹೋಗದ ಸ್ಥಿತಿ ನಿರ್ವಣವಾಗಿರುತ್ತದೆ.

ಬಸ್ ನಿಲ್ದಾಣ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಹಾಗೂ ಪ್ರಯಾಣಿಕರು ಹಲವು ಬಾರಿ ಶಾಸಕರು, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಹಾಗೂ ಗ್ರಾಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಬಸ್ ನಿಲ್ದಾಣ ದುರಸ್ತಿಪಡಿಸಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ಬಹಳ ವರ್ಷದ ಹಿಂದೆ ನಿರ್ವಿುಸಿದ ಬಸ್ ನಿಲ್ದಾಣ ಸಂಪೂರ್ಣ ಹಾಳಾಗಿದ್ದು, ಪ್ರಯಾಣಿಕರಿಗೆ ನಿಂತುಕೊಳ್ಳಲು ಜಾಗವಿಲ್ಲದಂತಾಗಿದೆ. ಆದ್ದರಿಂದ ಶಾಸಕರು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಬಸ್ ನಿಲ್ದಾಣ ದುರಸ್ತಿಪಡಿಸಬೇಕು. | ಮಹೇಶಪ್ಪ ಎಚ್.ಆರ್. ಸ್ಥಳೀಯ ನಿವಾಸಿ

ಚೌಡಯ್ಯದಾನಪುರ ಕ್ರಾಸ್​ನ ಬಸ್ ನಿಲ್ದಾಣ ವಾಕರಸಾ ಸಂಸ್ಥೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ನಾವು ಅನುದಾನ ನೀಡಿ ಅಭಿವೃದ್ಧಿಪಡಿಸಲು ಬರುವುದಿಲ್ಲ. ಈ ಬಗ್ಗೆ ಆಯಾ ಗ್ರಾಪಂ ಗಮನಕ್ಕೆ ತಂದು ಅಭಿವೃದ್ಧಿಪಡಿಸಲು ತಿಳಿಸಲಾಗುವುದು. | ಆರ್.ಸಿ. ಪಾಟೀಲವಾಕರಸಾ ಸಂಸ್ಥೆ ಸ್ಥಳೀಯ ಘಟಕದ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net