

ಹಾಸನ: ಕನ್ನಡ ಸಾಹಿತ್ಯಕ್ಕೆ 1500 ವರ್ಷಗಳ ಇತಿಹಾಸವಿದ್ದು, ನಮ್ಮ ನಂತರವೂ ಕನ್ನಡ ಉಳಿದುಕೊಳ್ಳುತ್ತದೆ ಎಂದು ಬುಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಹೇಳಿದರು.
ಅರಕಲಗೂಡು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಬಂದಿರುವುದು ನಮ್ಮ ರಾಜ್ಯ, ದೇಶಕ್ಕೆ ಹೆಮ್ಮೆಯ ವಿಷಯ. ಜತೆಗೆ ವೈಯಕ್ತಿಕವಾಗಿಯೂ ಹೆಮ್ಮೆಯ ವಿಷಯ. ಇದು ಮೊದಲ ಬಾರಿಗೆ ಮೂಲ ಕನ್ನಡ ಕೃತಿಗೆ ಬಂದಿರುವ ಪ್ರಶಸ್ತಿ. ಭಾರತದ ಮೊದಲ ಅನುವಾದಕಿಗೆ ಅಂದರೆ ನನಗೆ ಬಂದಿರುವ ಪ್ರಶಸ್ತಿ ಎಂದರು.
ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ದೀಪಾ ಭಾಸ್ತಿ ಕಡೆಗಣನೆ ಮಾಡಿದ್ದಾರೆ ಎಂಬ ಬಿಜೆಪಿ-ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಕೀಯ ಹೇಳಿಕೆಗಳಿಗೆ ನಾನು ಕಮೆಂಟ್ ಮಾಡಲ್ಲ. ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಅದರ ಬಗ್ಗೆ ನೋ ಕಮೆಂಟ್ಸ್ ಎಂದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತವಾದ ಕುರಿತು ಪ್ರತಿಕ್ರಿಯಿಸಿದ ಅವರು, ಬೇರೊಂದು ವೈಯಕ್ತಿಕ ದೃಷ್ಟಿಯಲ್ಲಿ ಚರ್ಚೆ ಮಾಡುವ ಆಸಕ್ತಿ ನನಗೆ ಇಲ್ಲ. ಅಂತಹ ವಿಷಯಕ್ಕೆ ನಾನು ಬರಲ್ಲ. ನಾನು ಸಾಹಿತ್ಯದಲ್ಲಿ ಮಾಡಿರುವ ಕೆಲಸ, ಸಾಹಿತ್ಯದಲ್ಲಿ ಮಾಡಬೇಕಿರುವ ಕೆಲಸಗಳು ನನಗೆ ಮುಖ್ಯ ಎಂದರು.
ನಮ್ಮಿಂದ ಕನ್ನಡ ಅಲ್ಲ, ನಾವಿರುವುದು ಕನ್ನಡಕ್ಕೋಸ್ಕರ. ನಾನು ಕೆಲಸ ಮಾಡುವುದು ಕನ್ನಡಕ್ಕೋಸ್ಕರ. ವೈಯಕ್ತಿಕ ಟೀಕೆಗಳ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ. ಸಾಹಿತ್ಯ ದೃಷ್ಟಿಯಲ್ಲಿ ಮೊದಲ ಬಾರಿಗೆ ಕನ್ನಡ ಭಾಷೆಗೆ ಬುಕರ್ ಪ್ರಶಸ್ತಿ ಬಂದಿದೆ. ಮೊದಲು ಹಿಂದಿಯ ಗೀತಾಂಜಲಿ ಶ್ರೀ ಅವರಿಗೆ ಬಂದಿತ್ತು, ಅದನ್ನು ಅನುವಾದ ಮಾಡಿದವರು ಅಮೆರಿಕದ ಡೇಸಿ ರಾಕ್ ಎನ್ನುವವರು. ಇದು ಎರಡನೇ ಸಲ ಇಂಡಿಯಾ ಸಾಹಿತ್ಯ ಕೃತಿಗೆ ಬುಕರ್ ಪ್ರಶಸ್ತಿ ಬರುತ್ತಿದೆ. ನಮ್ಮಲ್ಲಿ ಕನ್ನಡ ಮಾತ್ರವಲ್ಲ ಭಾರತದ ಭಾಷೆಗಳ ಒಳ್ಳೆಯ ಕೃತಿಗಳೂ ಸಾವಿರಾರು ಇವೆ ಎಂದರು.
ಇದರ ಮಧ್ಯೆ ಸುಮ್ಮನೆ ಬೇರೆ ಚರ್ಚೆಗೆ ಹೋಗದೆ ಸಾಹಿತ್ಯವನ್ನು ಮುಂದಿಟ್ಟುಕೊಂಡು ಅದರಲ್ಲಿ ಏನು ಮಾಡಬಹುದು ಎನ್ನುವುದು ನನಗೆ ಮುಖ್ಯ. ಇವತ್ತು ಮೊದಲ ಬಾರಿಗೆ ಅರಕಲಗೂಡು ದಸರಾಗೆ ಬಂದಿದ್ದೀನಿ. ನನಗೆ ವೈಯಕ್ತಿಕವಾಗಿ ತುಂಬ ದೊಡ್ಡ ಹೆಮ್ಮೆ ಎಂದರು.