

ಚಿಕ್ಕಬಳ್ಳಾಪುರ : ಹೆಚ್ಚಿನ ಜನರ ಸಹಭಾಗಿತ್ವದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಾಣ, ಪ್ರತಿಜ್ಞಾ ವಿಧಿ ಸ್ವೀಕಾರ ಸೇರಿ ನಾನಾ ಚಟುವಟಿಕೆಯೊಂದಿಗೆ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಭಾನುವಾರ ಆಚರಿಸಲಾಯಿತು. ಈ ಮೂಲಕ ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಮಹತ್ವ ಸಾರಲಾಯಿತು.
ಜಿಲ್ಲೆಯ ಗಡಿ ಭಾಗ ಮೊಡಕು ಹೊಸಹಳ್ಳಿಯಿಂದ ಕೋಲಾರ ಜಿಲ್ಲೆಯ ಗಡಿಯಲ್ಲಿರುವ ಎಚ್.ಕ್ರಾಸ್‌ವರೆಗೂ 48 ಕಿ.ಮೀ.ಉದ್ದದ ಮಾನವ ಸರಪಳಿ ನಿರ್ಮಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಮತ್ತು ಸಂಘ ಸಂಸ್ಥೆಗಳ ಸದಸ್ಯರು ಸೇರಿ 35 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ, ಭಾರತ ಸಂವಿಧಾನ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಪರ ಘೋಷಣೆ ಕೂಗಿದರು.
ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಕೈಗೊಂಡಿದ್ದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿ, ಮಾತನಾಡಿದರು.
ಅನೇಕ ರಾಷ್ಟ್ರಗಳು ವಿವಿಧ ರೀತಿಯ ಆಡಳಿತ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ ಭಾರತ. ವಿವಿಧ ಜಾತಿಧರ್ಮ, ಕಲೆ, ಪರಂಪರೆ, ಸಂಸ್ಕೃತಿಯನ್ನು ಹೊಂದಿದ್ದರೂ ಏಕತೆಯನ್ನು ಸಾರುತ್ತಿದೆ. ಇದರ ಯಶಸ್ವಿಗೆ 78 ವರ್ಷಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣ ಎಂದರು.
ರಾಜ್ಯ ಸರ್ಕಾರಕ್ಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗೌರವ, ಬದ್ಧತೆ ಇದೆ. ಇದಕ್ಕೆ 2,500 ಕಿ.ಮೀ.ಉದ್ದದ ಬೃಹತ್ ಮಾನವ ಸರಪಳಿ ನಿರ್ಮಾಣದ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳ ಸಂದೇಶ ಸಾರಲಾಗುತ್ತಿದೆ ಎಂದರು.
ವಿಶ್ವಸಂಸ್ಥೆಯು 2007 ಸೆ.15ರಂದು ಕೈಗೊಂಡ ನಿರ್ಣಯದಂತೆ 2008ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತಿದೆ. ದೇಶದ ಸಂವಿಧಾನ, ಪೀಠಿಕೆ, ಅದರ ಅರ್ಥ ಮತ್ತು ಮಹತ್ವದ ಬಗ್ಗೆ ಸಮಾಜದ ಮಕ್ಕಳಿಗೆ ಅರ್ಥೈಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ. ಯುವ ಜನರು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಅರಿತುಕೊಳ್ಳಬೇಕು ಎಂದರು.
ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಮಾತನಾಡಿ, ಹಿಂದಿ ರಾಷ್ಟ್ರಭಾಷೆ ಅಲ್ಲ. ಒಂದು ಅಧಿಕೃತ ಭಾಷೆ ಆಗಿದೆ. ಜಗತ್ತಿನಲ್ಲಿನ ರಾಷ್ಟ್ರಗಳ ಸಂವಿಧಾನಗಳ ಪೈಕಿ ಭಾರತದ್ದು ವಿಶಿಷ್ಟವಾದುದು ಎಂದರು.
ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಅಶ್ವಿನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜಾನಂದ ರೆಡ್ಡಿ, ನಗರಸಭೆ ಸದಸ್ಯರಾದ ವೆಂಕಟೇಶ್, ಅಂಬರೀಶ್, ರಫೀಕ್, ಚಂದ್ರಶೇಖರ್, ನರಸಿಂಹಮೂರ್ತಿ ಮತ್ತಿತರರು ಇದ್ದರು.
ದೇಶದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ, ಹಕ್ಕುಗಳು, ನ್ಯಾಯ, ಸ್ವಾತಂತ್ರ್ಯ ಸಿಗಬೇಕಾಗಿದ್ದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದಿರಬೇಕು. ಇಲ್ಲವಾದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ತಾರತಮ್ಯ, ಮೇಲು-ಕೀಳುಗಳು ಹೆಚ್ಚಾಗಿ ದೇಶ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತದೆ.-ಡಾ.ಎಂ.ಸಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ
ಪ್ರತಿಜ್ಞಾ ವಿಧಿ ಸ್ವೀಕಾರ
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ, ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಪ್ರಜಾಪ್ರಭುತ್ವ ದಿನದ ಅಂಗವಾಗಿ ಕರ್ನಾಟಕದ ಬೀದರ್‌ನಿಂದ ಚಾಮರಾಜನಗರದವರೆಗೆ 25 ಲಕ್ಷ ಜನ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ 48 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸಲಾಗಿತ್ತು. ಹಾಗೆಯೇ ಅರಣ್ಯ ಇಲಾಖೆಯ ವತಿಯಿಂದ ದಾರಿಯುದ್ದಕ್ಕೂ 100 ಮೀಟರ್‌ಗೆ ಒಂದರಂತೆ ಸಸಿ ನೆಡಲಾಯಿತು.