ಬೇಬಿಬೆಟ್ಟದ ದನಗಳ ಜಾತ್ರೆ ಅದ್ದೂರಿ ಆಚರಣೆಗೆ ಕ್ರಮ

20-pnp 1
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರೆ ಆಯೋಜನೆ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮಗಳ ಮುಖಂಡರ ಸಭೆ ನಡೆಸಿದರು. ಎ.ಎಲ್.ಕೆಂಪೂಗೌಡ, ಕೆ.ಟಿ.ಗೋವಿಂದೇಗೌಡ, ಯಜಮಾನ್ ತಮ್ಮಣ್ಣ ಇತರರು ಇದ್ದರು.
Published on

ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಭಾರಿ ದನಗಳ ಜಾತ್ರಾ ಮಹೋತ್ಸವವನ್ನು ಅದ್ದೂರಿ ಹಾಗೂ ವಿಶೇಷ ರೀತಿಯಲ್ಲಿ ಆಚರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಬೇಬಿಬೆಟ್ಟದ ದನಗಳ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ ಈ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರ ಜತೆ ಸಭೆ ನಡೆಸಿ ಮಾತನಾಡಿದರು. ತಂದೆ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರು ಹಳ್ಳಿಕಾರ್ ತಳಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅದ್ದೂರಿಯಾಗಿ ಬೇಬಿ ಜಾತ್ರಾ ಮಹೋತ್ಸವವನ್ನು ನಡೆಸಿದಂತೆಯೇ ಈ ಬಾರಿಯೂ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಏನೇನು ಕ್ರಮ ಅನುಸರಿಸಬೇಕೋ ಎಲ್ಲವನ್ನೂ ಅಧಿಕಾರಿಗಳು ಹಾಗೂ ಜಾತ್ರಾ ವ್ಯಾಪ್ತಿ ಗ್ರಾಮಗಳ ಮುಖಂಡರ ಸಹಕಾರದೊಂದಿಗೆ ಆಚರಿಸಲಾಗುವುದು ಎಂದರು.

ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೌರಾಣಿಕ ನಾಟಕ, ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಸೇರಿದಂತೆ ಇತರ ಕಾರ್ಯಕ್ರಮಗಳ ಆಯೋಜನೆಗೆ ಸರ್ಕಾರದಿಂದ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು.
ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿ, ಬೇಬಿ ಜಾತ್ರೆ ಅದ್ದೂರಿಯಾಗಿ ಆಚರಿಸಲು ಸರ್ಕಾರದಿಂದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶಾಸಕರು ವಿಶೇಷ ಅನುದಾನ ತರಬೇಕು ಎಂದು ಮನವಿ ಮಾಡಿದರು.

ಸಾವಯವ ಕೃಷಿಕ ಶ್ಯಾದನಹಳ್ಳಿ ಚಲುವರಾಜು ಮಾತನಾಡಿ, ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಕರೆತರುವ ಹಿನ್ನೆಲೆಯಲ್ಲಿ ಬಹುಮಾನಗಳ ಸಂಖ್ಯೆ ಹೆಚ್ಚಿಸಬೇಕು. ಜತೆಗೆ ಜಾತ್ರೆ ಮೈದಾನದಲ್ಲಿ ಮದ್ಯ ಮಾರಾಟ ತಡೆಗಟ್ಟಬೇಕು. ತಡವಾಗಿ ಬರುವ ರೈತರ ರಾಸುಗಳ ಮಾಲೀಕರ ಹೆಸರನ್ನು ಬಹುಮಾನಕ್ಕೆ ಪರಿಗಣಿಸಬಾರದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ ಮಾತನಾಡಿ, ಪಂಚಾಯಿತಿಗಳಿಂದ ಅನುದಾನ ಒದಗಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಬೇಕು. ಕುಡಿಯುವ ನೀರು, ಶೌಚಗೃಹಗಳು ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿ.ಪಂ. ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಚಿನಕುರಳಿ ಯಜಮಾನ್ ತಮ್ಮಣ್ಣ, ಕಾಂಗ್ರೆಸ್ ಮುಖಂಡರಾದ ಆರ್.ಎ.ನಾಗಣ್ಣ, ಕೆ.ಕುಬೇರ್, ಬಿ.ಜೆ.ಸ್ವಾಮಿ ಇತರರು ಮಾತನಾಡಿದರು. ರೈತಸಂಘದ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ರಾಗಿಮುದ್ದನಹಳ್ಳಿ ಶ್ಯಾಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net