ಗುಂಡು ಹಾರಿಸಿ ಕೊಲೆಗೆ ಯತ್ನಿಸಿದವನ ಬಂಧನ

ಗುಂಡು ಹಾರಿಸಿ ಕೊಲೆಗೆ ಯತ್ನಿಸಿದವನ ಬಂಧನ
Published on

ಸೋಮವಾರಪೇಟೆ: ಸೋಮವಾರಪೇಟೆ ತಾಲೂಕಿನ ಹಚ್ಚಿನಾಡು ಗ್ರಾಮದಲ್ಲಿ ನ.9 ರಂದು ವ್ಯಕ್ತಿಯೊರ್ವನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ಚಾಂಡಾನನ್ನು ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಚ್ಚಿನಾಡು ಗ್ರಾಮದ ಅಣ್ಣಯ್ಯ (ಮಧು) ಎಂಬವರ ಮೇಲೆ ಅದೇ ಗ್ರಾಮದ ಕಾರ್ಮಿಕ ಚಾಂಡಾ ರಾತ್ರಿ 10.30ರ ವೇಳೆಗೆ ಕೋವಿಯಿಂದ ಗುಂಡು ಹಾರಿಸಿದ್ದ. ಘಟನೆಯಿಂದ ಮಧು ಅವರ ಹೊಟ್ಟೆ, ಕೈ ಭಾಗಕ್ಕೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಗುಂಡು ಹಾರಿಸಿದ ನಂತರ ಚಾಂಡಾ ಹಾಗೂ ಇಬ್ಬರು ಆರೋಪಿಗಳು ಕೋವಿ ಸಹಿತ ಪರಾರಿಯಾಗಿದ್ದರು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ತನಿಖೆಯ ಬೆನ್ನಟ್ಟಿದ ಪೊಲೀಸರು ಪ್ರಮುಖ ಆರೋಪಿ ಚಾಂಡಾನ ಬಂಧನಕ್ಕೆ ಬಲೆ ಬೀಸಿದ್ದರು. ಚಾಂಡಾ ಹಚ್ಚಿನಾಡು ಸಮೀಪದ ಕುಂದುಕಾಡಿನಲ್ಲಿ ಅವಿತಿದ್ದ. ಆರೋಪಿಯ ಬಳಿ ಕೋವಿ ಇದ್ದ ಹಿನ್ನೆಲೆ ಬಂಧನ ಕ್ಲಿಷ್ಟಕರವಾಗಿತ್ತು. ಆರೋಪಿಗೆ ಅರಣ್ಯದ ಮಾಹಿತಿ ಇತ್ತು. ಆದರೆ, ಪೊಲೀಸರು ಅರಣ್ಯದಲ್ಲಿ ಹುಡುಕಾಟ ನಡೆಸುವುದು ಸವಾಲಾಗಿತ್ತು.

ಕಾಡಿನಲ್ಲಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್‌ನಲ್ಲೇ ಕಾಡುಪ್ರಾಣಿಗಳನ್ನು ಕೊಂದು ತಿಂದು ನಾಲ್ಕು ದಿನ ಕಳೆದಿದ್ದ.

ಗುರುವಾರ ಬೆಳಗ್ಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್, ಸಿಬ್ಬಂದಿ ಲೋಕೇಶ್, ಶರತ್, ತೀರ್ಥಕುಮಾರ್, ರವಿಕಾಂತ್, ಮಲ್ಲೇಶ್, ರೆಹಮಾನ್ ಕಾಡಿನಲ್ಲಿ ಕಾರ್ಯಾಚರಣೆಗೆ ಇಳಿದಾಗ, ಕಾಡಿನ ಮಧ್ಯದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆ ಜಾಗಕ್ಕೆ ತೆರಳಿದ ಪೊಲೀಸರು ಮಾಂಸ ಬೇಯಿಸುತ್ತಿದ್ದ ಅರೋಪಿಯನ್ನು ಸಮಾಧಾನದಲ್ಲೇ ಮಾತನಾಡಿಸಿದ್ದಾರೆ. ಒಂದಷ್ಟು ನಿತ್ರಾಣಗೊಂಡಿದ್ದ ಚಾಂಡಾ ಯಾವುದೇ ಪ್ರತಿರೋಧ ಒಡ್ಡದೆ ಪೊಲೀಸರಿಗೆ ಶರಣಾಗಿದ್ದಾರೆ. ಲೋಡ್ ಆಗಿದ್ದ ಕೋವಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net