

ಸಕಲೇಶಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿದೇಶದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾದ ವತಿಯಿಂದ ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತಾರೆ ಎಂದು ಅಪಪ್ರಚಾರ ಮಾಡಿದ ರಾಹುಲ್ ಗಾಂಧಿ, ಇದೀಗ ದಲಿತರ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ವಿದೇಶದಲ್ಲಿ ಮಾತನಾಡಿರುವುದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ವಿದೇಶಗಳಿಗೆ ಅವರು ಹೋದಾಗ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇವರ ಸಂಸದ ಸ್ಥಾನವನ್ನು ರದ್ದುಪಡಿಸಬೇಕು ಎಂದು ಹೇಳಿದರು.
ದಲಿತ ಮುಖಂಡ ಸ್ಟೀವನ್ ಪ್ರಕಾಶ್ ಮಾತನಾಡಿ, ರಾಹುಲ್ ಗಾಂಧಿ ಅವರ ಮೀಸಲಾತಿ ವಿರೋಧಿ ಹೇಳಿಕೆ ಕೇವಲ ಸಂವಿಧಾನ ವಿರೋಧಿ ಹೇಳಿಕೆ ಮಾತ್ರವಲ್ಲ ದಲಿತ ಸಮುದಾಯದ ವಿರೋಧಿ ಹೇಳಿಕೆಯಾಗಿದೆ. ಇಲ್ಲಿ ಜಾತ್ಯತೀತತೆ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ವಿದೇಶದಲ್ಲಿ ಜಾತಿಯತೆ ಮಾಡುವುದು ಎಷ್ಟು ಸರಿ? ಒಟ್ಟಾರೆ ನಕಲಿ ಜಾತ್ಯಾತೀತತೆ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ರಾಹುಲ್ ಗಾಂಧಿ ಅವರನ್ನು ಕೂಡಲೆ ಸಂಸದ ಸ್ಥಾನದಿಂದ ವಜಾಗೊಳಿಸಲು ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆ ಅಂಗವಾಗಿ ಹಳೇ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಮಾಡಿ ರಾಹುಲ್ ಗಾಂಧಿ ವಿರುದ್ಧ ಘೋಷಣೆಕೂಗಿ ಅವರ ಭಾವಚಿತ್ರ ಸುಟ್ಟು ಆಕ್ರೋಶ ಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ನಿ ಸೋಮಶೇಖರ್, ಬೊಮ್ಮನಕೆರೆ ಮಧು, ಪುರಸಭಾ ಸದಸ್ಯ ಪ್ರದೀಪ್, ವನಜಾಕ್ಷಿ, ರೇಖಾ ರುದ್ರಕುಮಾರ್, ಬಿಜೆಪಿ ಮುಖಂಡ ರಾಜ್‌ಕುಮಾರ್, ದೀಪಕ್, ನವೀನ್ ಶೆಟ್ಟಿ, ಸುಧೀಶ್, ಬಾಳ್ಳು ಶಿವಕುಮಾರ್, ಶೇಖರ್ ಕಬ್ಬಿನಗದ್ದೆ ಇತರರು ಇದ್ದರು.