ಕೋವಿಡ್ ಲಸಿಕೆಗಾಗಿ ವಾಗ್ವಾದ

3KWR5
Published on

ಕಾರವಾರ: ಕೋವಿಡ್ ಲಸಿಕೆ ಕೊರತೆಯು ಇಲ್ಲಿನ ಕ್ರಿಮ್್ಸ ಆವರಣದಲ್ಲಿ ಶನಿವಾರ ಅಧಿಕಾರಿಗಳು ಹಾಗೂ ಜನರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಗತ್ಯವಿದ್ದಷ್ಟು ಲಸಿಕೆ ಸಂಗ್ರಹವಿಲ್ಲದ ಕಾರಣ ಕ್ರಿಮ್ಸ್​ನಲ್ಲಿ 150 ಜನರಿಗೆ ಮಾತ್ರ ಕೋವಿಶೀಲ್ಡ್ ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಶನಿವಾರ ಬೆಳಗ್ಗೆ ಅದಕ್ಕಿಂತ ಹೆಚ್ಚು ಜನ ಸೇರಿದ್ದರು. ಮೊದಲ ಡೋಸ್ ಪಡೆದು 85 ದಿನ ಕಳೆದು ಎರಡನೇ ಡೋಸ್​ಗೆ ಅರ್ಹತೆ ಪಡೆದವರು, ಹಾಗೂ ಮೊದಲ ಬಾರಿ ಲಸಿಕೆ ಪಡೆಯಲಿಚ್ಛಿಸುವವರೂ ಇದ್ದರು. ಆದರೆ, ಲಸಿಕೆ ಲಭ್ಯವಿಲ್ಲ ಎಂದು ಮಾಹಿತಿ ತಿಳಿದ ನಂತರ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು.

‘ಈಗಾಗಲೇ ಎರಡು, ಮೂರು ದಿನದಿಂದ ಬಂದು ಕಾದು ವಾಪಸಾಗಿದ್ದೇವೆ. ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಇಂದು ಮತ್ತೆ ಲಸಿಕೆ ಇಲ್ಲ ಎನ್ನುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ಅಸಮಾಧಾನ ಹೊರ ಹಾಕಿದರು. ನಂತರ ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ ಸೇರಿದ್ದವರನ್ನು ಸಮಾಧಾನಪಡಿಸಿ ಅವರಿಗೆ ಮುಂದೆ ಲಸಿಕೆ ನೀಡುವ ದಿನಾಂಕವಿರುವ ಟೋಕನ್ ನೀಡಿ ಕಳಿಸಲಾಯಿತು.

ಎಲ್ಲೆಡೆ ತೊಂದರೆ: ಕೋವಿಡ್ ಎರಡನೇ ಅಲೆಯ ಭಯಾನಕ ಪರಿಣಾಮದ ನಂತರ ಜನ ಸ್ವಯಂಪ್ರೇರಿತವಾಗಿ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ. ಆದರೆ, ಅಗತ್ಯವಿದ್ದಷ್ಟು ಲಸಿಕೆ ಪೂರೈಕೆಯಾಗದ ಕಾರಣ ಜಿಲ್ಲೆಯೆಲ್ಲೆಡೆ ಕೇಂದ್ರಗಳಿಗೆ ಜನ ಬಂದು ವಾಪಸಾಗುತ್ತಿದ್ದಾರೆ. 100ಕ್ಕೂ ಅಧಿಕ ಲಸಿಕಾ ಕೇಂದ್ರ ತೆರೆಯಲಾಗಿದೆ. ಪ್ರತಿ ದಿನ ಜಿಲ್ಲೆಯಲ್ಲಿ 15 ಸಾವಿರದಷ್ಟು ಲಸಿಕೆ ನೀಡುವ ಸಾಮರ್ಥ್ಯ ಜಿಲ್ಲೆಗಿದೆ. ಆದರೆ, ದಿನಕ್ಕೆ ಏಳೆಂಟು ಸಾವಿರ ಮಾತ್ರ ಲಸಿಕೆ ಲಭ್ಯವಿರುತ್ತಿದೆ. ಅದರಲ್ಲಿ ಕಾಲೇಜ್ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹೀಗೆ ವಿವಿಧ ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಲು ಮಹತ್ವ ನೀಡಲಾಗುತ್ತಿದೆ. ಕ್ರಿಮ್್ಸ ಆಸ್ಪತ್ರೆ ಹಾಗೂ ವಿವಿಧ ತಾಲೂಕು ಆಸ್ಪತ್ರೆಗಳನ್ನು ಹೊರತುಪಡಿಸಿ ಉಳಿದ ವ್ಯಾಕ್ಸಿನ್ ಸೆಂಟರ್​ಗಳಲ್ಲಿ ವಾರದ ಎರಡು ದಿನವೂ ಲಸಿಕೆ ಸಿಗುತ್ತಿಲ್ಲ. ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ 20 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ಸಿಗದಂತಾಗಿದೆ ಎಂಬ ಮಾಹಿತಿ ಇದೆ.

9500 ಡೋಸ್ ಲಭ್ಯ: ಜಿಲ್ಲೆಯಲ್ಲಿ ಶನಿವಾರ 7104 ಜನರಿಗೆ ಲಸಿಕೆ ನೀಡಲಾಗಿದೆ. ಅದರಲ್ಲಿ 3303 ಕಾಲೇಜ್ ವಿದ್ಯಾರ್ಥಿಗಳಿಗೆ, 2798 ಜನರಿಗೆ ಎರಡನೇ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. 9500 ಡೋಸ್ ಕೋವಿಶೀಲ್ಡ್ ಹಾಗೂ 320 ಡೋಸ್ ಕೋವ್ಯಾಕ್ಸಿನ್ ಲಸಿಕೆ ಸದ್ಯ ಸಂಗ್ರಹವಿದೆ ಎಂದು ಡಿಎಚ್​ಒ ಕಚೇರಿಯ ಅಧಿಕಾರಿ ಡಾ. ರಮೇಶ ರಾವ್ ಮಾಹಿತಿ ನೀಡಿದ್ದಾರೆ. ಅಂಕೋಲಾದಲ್ಲಿ 1100, ಭಟ್ಕಳ-1010, ಹಳಿಯಾಳ-970, ಹೊನ್ನಾವರ-600, ಜೊಯಿಡಾ-630, ಕಾರವಾರ-570, ಮುಂಡಗೋಡ-540, ಕುಮಟಾ-250, ಶಿರಸಿ-1140, ಸಿದ್ದಾಪುರ-480, ಯಲ್ಲಾಪುರ-670, ದಾಂಡೇಲಿ-720 ಡೋಸ್ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net