ಟೇಬಲ್‌ನಲ್ಲಿದ್ದ ₹5 ಲಕ್ಷ ಮಾಯ!

ಚಿಂತಾಮಣಿಯ ಎಪಿಎಂಸಿ ದವಸ ಧಾನ್ಯ ಮಾರುಕಟ್ಟೆಯ ಕೈಲಾಸ ಟ್ರೇಡರ್ಸ್‌ ಅಂಗಡಿಯ ಕ್ಯಾಷ್ ಟೇಬಲ್ ಮುರಿದಿರುವ ಕಳ್ಳರು.
8cmy10
ಚಿಂತಾಮಣಿಯ ಎಪಿಎಂಸಿ ದವಸ ಧಾನ್ಯ ಮಾರುಕಟ್ಟೆಯ ಕೈಲಾಸ ಟ್ರೇಡರ್ಸ್‌ ಅಂಗಡಿಯ ಕ್ಯಾಷ್ ಟೇಬಲ್ ಮುರಿದಿರುವ ಕಳ್ಳರು.
Published on


ಮಾಲೀಕ ಪಕ್ಕದಂಗಡಿಗೆ ಹೋಗಿಬರುವಷ್ಟರಲ್ಲಿ ಕಳವು


ಚಿಂತಾಮಣಿ:
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಅಂಗಡಿಯೊಂದರ ಕ್ಯಾಷ್ ಟೇಬಲ್‌ನಲ್ಲಿದ್ದ 5 ಲಕ್ಷ ರೂ.ಗಳನ್ನು ಕ್ಷಣಾರ್ಧದಲ್ಲಿ ದೋಚಲಾಗಿದೆ.
ಮಾರುಕಟ್ಟೆಯ ಕೈಲಾಸ್ ಟ್ರೇಡರ್ಸ್ ಮಾಲೀಕ ಎಂ.ಎಲ್. ರಾಮಕೃಷ್ಣಪ್ಪ ಹಣ ಕಳೆದುಕೊಂಡವರು.
ಭಾನುವಾರ ಸಂತೆ ದಿನವಾಗಿದ್ದು, ಹೆಚ್ಚಿನ ಗಿರಾಕಿಗಳು ಅಕ್ಕಿ ಖರೀದಿಗೆ ಬಂದಿದ್ದರು. ಗಿರಾಕಿಯೊಬ್ಬರಿಗೆ 2 ಮೂಟೆ ಅಕ್ಕಿ ಮಾರಾಟ ಮಾಡಿದ್ದ ರಾಮಕೃಷ್ಣಪ್ಪ, ಇನ್ನಷ್ಟು ಅಕ್ಕಿ ಖರೀದಿಸುವ ಸಲುವಾಗಿ ಪಕ್ಕದ ಅಂಗಡಿಗೆ ಹೋಗಿದ್ದರು. ಈ ವೇಳೆ ಕ್ಯಾಷ್ ಟೇಬಲ್‌ನ ಬೀಗ ಹಾಕಿದ್ದ ಡೋರ್ ಮುರಿದು 5 ಲಕ್ಷ ರೂ. ದೋಚಿದ್ದಾರೆ.
ಸಂತೆ ದಿನವಾಗಿದ್ದರಿಂದ ಎಲ್ಲ ಅಂಗಡಿಗಳಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. ಅದೇರೀತಿ ಕೈಲಾಸ್ ಟ್ರೇಡರ್ಸ್‌ ಮಾಲೀಕರು ಅಕ್ಕಿ ಮಾರಾಟದಿಂದ ಬಂದಿದ್ದ ಹಣವನ್ನು ಕ್ಯಾಷ್ ಟೇಬಲ್‌ನಲ್ಲಿ ಇಟ್ಟಿರುವುದನ್ನು ಗಮನಿಸಿದ್ದ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಹಣ ಕಳವಾಗಿರುವ ಬಗ್ಗೆ ರಾಮಕೃಷ್ಣ ಚಿಂತಾಮಣಿ ನಗರ ಠಾಣೆಗೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇನ್‌ಸ್ಪೆಕ್ಟರ್ ವಿಜಿಕುಮಾರ್ ಹಾಗೂ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದಿಂದ ಪರಿಶೀಲಿಸಲಾಯಿತು.
ಹೆಚ್ಚಿದ ಕಳ್ಳತನ: ಆಗಸ್ಟ್ 9ರಂದು ಇದೇ ಎಪಿಎಂಸಿ ದವಸಧಾನ್ಯ ಮಾರುಕಟ್ಟೆಗೆ ಮುಸುಕಿನ ಜೋಳ ಖರೀದಿಸಲು ಬಂದ ಇಬ್ಬರು ವ್ಯಕ್ತಿಗಳು ಜೋಳದ ಸ್ಯಾಂಪಲ್ ನೋಡುವ ನೆಪದಲ್ಲಿ ರಮೇಶ್ ಟ್ರೇಡರ್ಸ್‌ ಅಂಗಡಿ ಮಾಲೀಕ ಪಿ.ಜಿ. ನಾಗರಾಜು ಅವರ ಗಮನ ಬೇರೆಡೆಗೆ ಸೆಳೆದು ಗಲ್ಲಾಪೆಟ್ಟಿಗೆಯಲ್ಲಿ ಇಟ್ಟಿದ್ದ 2.50 ಲಕ್ಷ ರೂ. ದೋಚಿದ್ದರು. ನಂತರ ಇದೇ ಮಾರುಕಟ್ಟೆಯ ಪಿ.ಜಿ. ಗೋಪಾಲ್ ಅವರ ಅಂಗಡಿಯ ಕ್ಯಾಷ್ ಟೇಬಲ್‌ನಲ್ಲಿಟ್ಟಿದ್ದ ಹಣ ಕಳವು ಮಾಡಲು ಕಿಡಿಗೇಡಿಗಳು ಯತ್ನಿಸಿದ್ದರು. ಸೆಪ್ಟೆಂಬರ್ 4ರಂದು ನಗರದ ಚೇಳೂರು ರಸ್ತೆಯ ಸರ್ಕಾರಿ ಬಸ್‌ಸ್ಟಾಂಡ್‌ಗೆ ಹೊಂದಿಕೊಂಡಿರುವ ರಘು ಬೂಸಾ ಅಂಗಡಿಯ ಶಟರ್ ಬಾಗಿಲು ಮುರಿದು ಗಲ್ಲಾಪೆಟ್ಟಿಗೆಯಲ್ಲಿಟ್ಟಿದ್ದ 25 ಸಾವಿರ ರೂ.ಗಳನ್ನು ದೋಚಿದ್ದರು. ಈ ಎಲ್ಲ ಪ್ರಕರಣ ನಗರ ಠಾಣೆಯಲ್ಲಿ ದಾಖಲಿಸಿದ್ದು, ಶೀಘ್ರವೇ ಖದೀಮರನ್ನು ಬಂಧಿಸಬೇಕೆಂದು ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net