40 ವರ್ಷದ ಜೆಡಿಎಸ್​ ಪಾರುಪತ್ಯ ಅಂತ್ಯ

devegowda
Published on
  • ಜಿಲ್ಲೆಯೊಂದಿಗೆ 1985ರಿಂದಲೂ ನಂಟು ಹೊಂದಿದ್ದ ದೇವೇಗೌಡರ ಕುಟುಂಬ
  •  ನಾಲ್ಕೂ ವಿಧಾನಸಭೆ ಕ್ಷೇತ್ರದಲ್ಲಿ ನೆಲೆ ಇಲ್ಲ

ಗಂಗಾಧರ್​ ಬೈರಾಪಟ್ಟಣ ರಾಮನಗರ

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಸೋಲಿನೊಂದಿಗೆ ಎಚ್​.ಡಿ.ದೇವೇಗೌಡರ ಕುಟುಂಬ ಜಿಲ್ಲೆಯಲ್ಲಿ ಮತ್ತೊಮ್ಮೆ ಹಿಡಿತ ಕಳೆದುಕೊಂಡಿದೆ.

1985ರಿಂದಲೂ ಜಿಲ್ಲೆಯೊಂದಿಗೆ ನಂಟು ಹೊಂದಿರುವ ದೇವೇಗೌಡರ ಕುಟುಂಬವನ್ನು ಜಿಲ್ಲೆಯ ಜನತೆ ಕೈ ಹಿಡಿಯುತ್ತಲೇ ಬಂದಿದ್ದಾರೆ. ಕೆಲವೊಮ್ಮೆ ಜಿಲ್ಲೆಯಲ್ಲಿ ಪಕ್ಷದ ನೆಲೆ ಸಂಪೂರ್ಣವಾಗಿ ಇಲ್ಲದಂತೆ ಆಯಿತು ಎನ್ನುವಷ್ಟರಲ್ಲಿಯೇ ಒಂದಿಲ್ಲೊಂದು ಕಾರಣಕ್ಕೆ ಇಲ್ಲಿನ ಜನರು ದೇವೇಗೌಡರ ಬೆಂಬಲಕ್ಕೆ ನಿಲ್ಲುವ ಮೂಲಕ ರಾಜಕೀಯವಾಗಿ ಅವರು ಪುಟಿದೇಳುವಂತೆ ಮಾಡಿದ್ದಾರೆ. ಆದರೆ, ಈಗ ಮತ್ತೊಮ್ಮೆ ಜಿಲ್ಲೆಯ ನಾಲ್ಕೂ ವಿಧಾನಸಭೆ ಕ್ಷೇತ್ರದಲ್ಲಿಯೂ ಜೆಡಿಎಸ್​ ನೆಲೆ ಇಲ್ಲದಂತೆ ಆಗಿದೆ. ಈ ಮೂಲಕ ಬಹುತೇಕ ನಾಲ್ಕು ದಶಕದ ನಂಟನ್ನು ಇಡೀ ಕುಟುಂಬ ಕಳೆದುಕೊಂಡಂತಾಗಿದೆ.

4 ದಶಕದ ನಂಟು:

ದೇವೇಗೌಡರು ರಾಜಕೀಯವಾಗಿ ಸಾಕಷ್ಟು ಬೆಳವಣಿಗೆ ಹೊಂದಿದ್ದರೂ ಜಿಲ್ಲೆಯ ಚುನಾವಣೆ ನಂಟು ಆರಂಭಗೊಂಡಿದ್ದು 1985ರಿಂದ. ಮೊದಲ ಬಾರಿಗೆ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಮೂಲಕ. ಈ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್​ ಎದುರಾಳಿ. ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ದೇವೇಗೌಡರು, ಇದೇ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಾರೆ. ಎರಡೂ ಕಡೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹೊಳೆನರಸೀಪುರ ಉಳಿಸಿಕೊಂಡು ಸಾತನೂರು ಕ್ಷೇತ್ರಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ನಡೆದ ಉಪಚುನಾವಣೆಯಲ್ಲಿ ಜನತಾ ಪಕ್ಷದ ಶಿವಲಿಂಗೇಗೌಡರೇ ಶಾಸಕರಾಗಿ ಆಯ್ಕೆ ಆಗುತ್ತಾರೆ.

1983ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ವೇಳೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಇದಾದ ನಂತರ 1985ರಲ್ಲಿ ಜನತಾ ಪಕ್ಷಕ್ಕೆ ಮತ್ತೆ ಸ್ಪಷ್ಟ ಜನಾಭಿಪ್ರಾಯ ಪಡೆಯುವ ಹಿನ್ನೆಲೆಯಲ್ಲಿ ಸರ್ಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋದಾಗ ಜನತಾ ಪಕ್ಷ 139 ಸ್ಥಾನಗಳಿಸಿ ಮತ್ತೆ ಹೆಗಡೆ ಮುಖ್ಯಮಂತ್ರಿಯಾಗಿ ಮುಂದುವರಿದರು. ತಮ್ಮ ವಿರುದ್ಧ ಕೇಳಿಬಂದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ರಾಮಕೃಷ್ಣ ಹೆಗಡೆ 1988ರ ಆಗಸ್ಟ್​ನಲ್ಲಿ ರಾಜೀನಾಮೆ ನೀಡಿದರು. ಆದರೆ, ಬದಲಾದ ರಾಜಕೀಯದಲ್ಲಿ ರಾಮಕೃಷ್ಣ ಹೆಗಡೆ ಅವರ ಉತ್ತರಾಧಿಕಾರಿಯಾಗಿ ಎಸ್​.ಆರ್​. ಬೊಮ್ಮಾಯಿ ನೇಮಕಗೊಂಡರು. ಮುಖ್ಯಮಂತ್ರಿ ಸ್ಥಾನದ ಆಕ್ಷಾಂಕಿಯಾಗಿದ್ದ ಎಚ್​.ಡಿ. ದೇವೇಗೌಡರು ಈ ಬೆಳವಣಿಗೆಯಿಂದ ಬೇಸತ್ತು ಚಂದ್ರಶೇಖರ್​ ನೇತೃತ್ವದ ಸಮಾಜವಾದಿ ಜನತಾಪಕ್ಷದ ಮೂಲಕ 1989ರ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದರು.

ಸಮಾಜವಾದಿ ಜನತಾ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಿದ್ದ ಗೌಡರು, 1989ರ ಸಾರ್ವತ್ರಿಕ ಚುನಾವಣೆಯಲ್ಲಿ ಅಂದಿನ ಅವಿಭಜಿತ ಬೆಂಗಳೂರು ಜಿಲ್ಲೆಯ ಕನಕಪುರ ಮತ್ತು ತವರು ಕ್ಷೇತ್ರ ಹಾಸನದ ಹೊಳೆನರಸೀಪುರದಿಂದ ಕಣಕ್ಕೆ ಇಳಿದಿದ್ದರು. ಕನಕಪುರದಲ್ಲಿ ಜೆಡಿಎಸ್​ನ ಹಿಂದಿನ ಕಾರ್ಯಾಧ್ಯಕ್ಷರಾಗಿದ್ದ ಪಿ.ಜಿ.ಆರ್​. ಸಿಂಧ್ಯಾ ಜನತಾದಳದಿಂದ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮರಿಲಿಂಗೇಗೌಡ ಕಾಂಗ್ರೆಸ್​ನಿಂದ ದೇವೇಗೌಡರಿಗೆ ಸ್ಪರ್ಧೆಯೊಡ್ಡಿದ್ದರು. ಅಲ್ಲಿ ಹೊಳೆನರಸಿಪುರದಲ್ಲಿ ಕಾಂಗ್ರೆಸ್​ನಿಂದ ಪುಟ್ಟಸ್ವಾಮಿಗೌಡ ಪ್ರಬಲ ಎದುರಾಳಿ. ಈ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಸಮಾಜವಾದಿ ಜನತಾಪಕ್ಷದಿಂದ 217 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿ ಇದ್ದರು.

7836 ಮತಗಳ ಅಂತರದ ಸೋಲು

ಕನಕಪುರ ಮತ್ತು ಹೊಳೆನರಸಿಪುರ ಎರಡೂ ಕ್ಷೇತ್ರಗಳಲ್ಲಿ ದೇವೇಗೌಡರು ಗೆಲುವು ಸಾಧಿಸಲು ಸಾಧ್ಯವಾಗಲೇ ಇಲ್ಲ. ಕನಕಪುರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಹೊಳೆನರಸೀಪುರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಕನಕಪುರದಲ್ಲಿ ಪಿ.ಜಿ ಆರ್​. ಸಿಂಧ್ಯಾ, ದೇವೇಗೌಡರಿಗಿಂತ 16390 ಹೆಚ್ಚು ಮತ ಪಡೆದಿದ್ದರು. ಇಲ್ಲಿ ಸಿಂಧ್ಯಾ 36614 ಮತಗಳು, ಕಾಂಗ್ರೆಸ್​ನ ಮರಿಲಿಂಗೇಗೌಡ 32245 ಪಡೆದರೆ, ದೇವೇಗೌಡರು 20224 ಮತಗಳನ್ನು ಮಾತ್ರ ಪಡೆಯಲು ಶಕ್ತರಾಗಿದ್ದರು. ಅತ್ತ ಹೊಳೆನರಸೀಪುರದಲ್ಲಿ ಜಿ.ಪುಟ್ಟಸ್ವಾಮಿ ಗೌಡ 53,297 ಮತಗಳನ್ನು ಪಡೆದು 45,461 ಮತ ಪಡೆದಿದ್ದ ದೇವೇಗೌಡರಿಗೆ 7836 ಮತಗಳ ಅಂತರದ ಸೋಲುಣಿಸಿದ್ದರು. ವಿಪರ್ಯಾಸವೆಂದರೆ 217 ಸ್ಥಾನಗಳಿಗೆ ಸ್ಪರ್ಧೆಯೊಡ್ಡಿದ್ದ ಸಮಾಜವಾದಿ ಜನತಾಪಕ್ಷ ಕೇವಲ 2 ಸ್ಥಾನ ಗಳಿಸಿತ್ತು. ಕೃಷ್ಣ ಭೈರೇಗೌಡರ ತಂದೆ ಸಿ.ಭೈರೇಗೌಡ ವೇಮಗಲ್​ನಿಂದ ಮತ್ತು ಹೆಗ್ಗಡದೇವನಕೋಟೆ ಎಸ್​ಸಿ ಮೀಸಲು ಕ್ಷೇತ್ರದಿಂದ ಎಂ.ಪಿ. ವೆಂಕಟೇಶ್​ ಜಯಗಳಿಸಿದ್ದರು.

ಒಂದಾದ ದೇವೇಗೌಡ - ಹೆಗಡೆ

1989ರ ಚುನಾವಣೆಯಲ್ಲಿ 178 ಸ್ಥಾನ ಪಡೆದ ಕಾಂಗ್ರೆಸ್​ ಜನತಾದಳ ಮತ್ತು ಸಮಾಜವಾದಿ ಜನತಾ ಪಾರ್ಟಿಯನ್ನು ಧೂಳಿಪಟ ಮಾಡಿ ಅಧಿಕಾರಕ್ಕೆ ಬಂದಿತ್ತು. ಆನಂತರ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವನಿಟ್ಟಿನಲ್ಲಿ ದೇವೇಗೌಡರು ಮತ್ತು ರಾಮಕೃಷ್ಣ ಹೆಗಡೆ 1992ರಲ್ಲಿ ಹೊಂದಾಣಿಕೆ ಮಾಡಿಕೊಂಡರು. 1994ರ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕೆ ಇಳಿದ ದೇವೇಗೌಡರು ಗೆಲುವು ಸಾಧಿಸುವ ಮೂಲಕ ಮುಖ್ಯಮಂತ್ರಿಯಾದರು. ಆನಂತರ ಪ್ರಧಾನ ಮಂತ್ರಿಯೂ ಆದರು.

ಮತ್ತೆ ಕೈ ಹಿಡಿದ ಕನಕಪುರ

ಪ್ರಧಾನಿ ಆದ ನಂತರ ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್​ಡಿಡಿ ಅವರಿಗೆ ತವರು ಜಿಲ್ಲೆಯಲ್ಲಿ ಸೋಲಾಯಿತು. ಮತ್ತೆ ಅವರಿಗೆ ಮರು ಜೀವ ನೀಡಿದ್ದು, ಅಂದಿನ ಕನಕಪುರ ಲೋಕಸಭೆ ಕ್ಷೇತ್ರ. ಇಲ್ಲಿ ನಡೆದ ಉಪಚುನಾವಣೆಯಲ್ಲಿ ದೇವೇಗೌಡರು ಡಿ.ಕೆ.ಶಿವಕುಮಾರ್​ ಅವರನ್ನು ಸೋಲಿಸುವ ಮೂಲಕ ಮತ್ತೆ ಸಂಸತ್​ ಪ್ರವೇಶ ಮಾಡಿದರು.

ಕುಮಾರ ಸ್ವಾಮಿ ಎಂಟ್ರಿ

1996ರಲ್ಲಿ ಮೊದಲ ಬಾರಿಗೆ ಕನಕಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡಿದ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನತೆ ಕೈ ಹಿಡಿದಿದ್ದರು. ನಂತರ 1999ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಸಾತನೂರು ಕ್ಷೇತ್ರದಿಂದ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್​ ವಿರುದ್ಧ ಸೋಲು ಕಂಡಿದ್ದರು. ಲೋಕಸಭೆ ಚುನಾವಣೆಯಲ್ಲಿಯೂ ಎಂವಿ ಚಂದ್ರಶೇಖರ ಮೂರ್ತಿ ಅವರಿಂದ ಸೋಲು ಕಂಡರು.

2004ರಿಂದ ಕುಮಾರ ಪರ್ವ

ಜಿಲ್ಲೆಯಲ್ಲಿ 2004 ವಿಧಾನಸಭೆ ಚುನಾವಣೆಯಿಂದ ಕುಮಾರ ಪರ್ವ ಆರಂಭಗೊಳ್ಳುತ್ತದೆ. ರಾಮನಗರ ಜನತೆ ಎಚ್​.ಡಿ. ಕುಮಾರಸ್ವಾಮಿ ಕೈ ಹಿಡಿಯುತ್ತದೆ. ನಂತರ ನಿರಂತರವಾಗಿ 2023ರ ಚುನಾವಣೆವರೆಗೂ ಒಂದಿಲ್ಲೊಂದು ಕ್ಷೇತ್ರದಲ್ಲಿ ಪಕ್ಷದ ಶಾಸಕರು ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿಯೂ ನಿಖಿಲ್​ ಸೋಲುವುದರೊಂದಿಗೆ ಇಡೀ ಜಿಲ್ಲೆ ಜೆಡಿಎಸ್​ ಹಿಡಿತದಿಂದ ಹೊರ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net