

ಮಾಗಡಿ : ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಮಾಗಡಿಯ ಬಹುದೊಡ್ಡ ಕಳ್ಳತನ ಪ್ರಕರಣದ ಭೇದಿಸಿರುವ ಪೊಲೀಸರು, ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಬೆಂಗಳೂರಿನ ಎಲ್.ಆರ್.ನಗರದ ನಿವಾಸಿ ಮಹಮದ್ ಖಾಲೀದ್ (43) ಬಂಧಿತ.
ಪಟ್ಟಣದ ಮನೆಯೊಂದರಲ್ಲಿ ಸೆ.22ರಂದು ರಾತ್ರಿ ಬಾಗಿಲು ಒಡೆದು ಕೋಟ್ಯಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಈ ಹಿಂದೆಯೇ ಇಬ್ಬರ ಬಂಧನವಾಗಿತ್ತು. ಈಗ ಪ್ರಕರಣದ ಮೂರನೇ ಆರೋಪಿಯನ್ನು ಎಸ್‌ಪಿ ಕಾರ್ತಿಕ್ ರೆಡ್ಡಿ, ಡಿವೈಎಸ್‌ಪಿ ಪ್ರವೀಣ್ ಮಾರ್ಗದರ್ಶನದಲ್ಲಿ ಮಾಗಡಿ ಠಾಣೆ ಸಿಪಿಐ ಗಿರಿರಾಜ್ ನೇತೃತ್ವದ ತಂಡ ಮೈಸೂರು ಜಿಲ್ಲೆಯ ಜಯಪುರ ಗ್ರಾಮದಲ್ಲಿ ಬಂಧಿಸಿದೆ. ಬಂಧಿತನಿಂದ 351 ಗ್ರಾಂ ಚಿನ್ನ, 765 ಗ್ರಾಂ ಬೆಳ್ಳಿ, 25 ಸಾವಿರ ನಗದು, ಕಳ್ಳತನ ಮಾಡಿದ ಹಣದಿಂದ ತೆಗೆದುಕೊಂಡ 10 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.
ವಿಮಾನ ನಿಲ್ದಾಣದಲ್ಲಿ ಲಾಕ್ ಆಗಿದ್ದರು: ಕಳ್ಳತನ ಮಾಡಿ ವಿದೇಶಕ್ಕೆ ಹಾರಲು ಹೊರಟಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದಾಸನ ಗುತ್ತಿ ಮಹಮದ್ ಸಾಧಿಕ್ ಮತ್ತು ಶಿವಮೊಗ್ಗದ ತೀರ್ಥಹಳ್ಳಿಯ ಅಮೂಜಾ ಎಂಬುವರನ್ನು ಮುಂಬೈನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು.
40ಕ್ಕೂ ಹೆಚ್ಚು ಪ್ರಕರಣ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ, ಆಯಾ ಜಿಲ್ಲೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬಾಗಿಲು ಹಾಕಿರುವ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದ ಖದೀಮರು ಭಾನುವಾರ ಮಾತ್ರ ಕಳ್ಳತನ ಮಾಡುದ್ದರು. ಆರೋಪಿಗಳ ವಿರುದ್ಧ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ತುಮಕೂರು, ಚಿಕ್ಕಮಂಗಳೂರು, ಉಡುಪಿ, ಮಂಗಳೂರು, ಹಾಸನ, ಮೈಸೂರಿನ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳು ಹಳೆಯ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದು, ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆರೋಪಿಗಳು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಕಲಿ ಪಾಸ್ ಪೋರ್ಟ್ ಮಾಡಿಸಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲದೆ, ಕೇರಳದ ಕಾಸರಗೋಡಿನಲ್ಲೂ ನಕಲಿ ಪಾಸ್ ಪೋರ್ಟ್ ಮಾಡಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ವಿದೇಶದಲ್ಲಿ ಮೊಬೈಲ್ ವ್ಯಾಪಾರ
ಈ ಮೊದಲೇ ಬಂಧಿತರಾಗಿರುವ ಸಾಧಿಕ್ ಮತ್ತು ಅಮೂಜಾ ಕಳ್ಳತನ ವೃತ್ತಿ ಗಂಧದ ಮರ ಕಳವಿನಿಂದ ಆರಂಭಗೊಂಡು ಮನೆ ಕಳ್ಳತನದವರೆಗೂ ಬಂದಿತ್ತು. ಬಹರೇನ್‌ನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಇಬ್ಬರೂ ಇಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಎಂದು ಗೊತ್ತಾಗುತ್ತಿದ್ದಂತೆ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಹಾರುತ್ತಿದ್ದರು.
ಬರುವಾಗ ಭೂ ಮಾರ್ಗ
ವಿದೇಶಕ್ಕೆ ತೆರಳಿದ ನಂತರ ಎಲ್ಲವೂ ಸರಿಯಾಗಿದೆ ಎಂದರಷ್ಟೇ ಆರೋಪಿಗಳು ವಾಯು ಮಾರ್ಗದ ಮೂಲಕ ದೇಶಕ್ಕೆ ವಾಪಾಸಾಗುತ್ತಿದ್ದರು. ಒಂದು ವೇಳೆ ಎಲ್ಲವೂ ಸರಿ ಇಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ನೇಪಾಳಕ್ಕೆ ಬಂದು, ಅಲ್ಲಿನ ಭೂ ಮಾರ್ಗದ ಮೂಲಕ ಸ್ವಸ್ಥಾನ ಸೇರಿ ಮತ್ತೊಂದು ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದರು.