ಧಾನ್ಯವರ್ತಕರ ಸಂಘದ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು

TGMC_Result
Published on

ತುಮಕೂರು: ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರು ಗ್ರೈನ್ ಮರ್ಚೆಂಟ್ಸ್​ ಕೋ-ಆಪರೇಟಿವ್​ ಬ್ಯಾಂಕ್​ ನಿರ್ದೇಶಕ ಮಂಡಳಿ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದೆ.

ಜ.12 ರಂದು ಟಿಜಿಎಂಸಿ ಬ್ಯಾಂಕ್​ ನಿರ್ದೇಶಕ ಮಂಡಳಿಯ 17 ಸ್ಥಾನಗಳಿಗೆ ಚುನಾವಣೆ ನಡೆದಿದ್ದು 28 ಮಂದಿ ಅಂತಿಮ ಕಣದಲ್ಲಿದ್ದರು. ಹಾಲಿ ಅಧ್ಯಕ್ಷ ಎಚ್​.ಎಂ.ದಿವ್ಯಾನಂದಮೂರ್ತಿ ಹಾಗೂ ಉಪಾಧ್ಯಕ್ಷ ಸಿ.ಆರ್​.ನಟರಾಜ್​ ನೇತೃತ್ವದ ತಂಡದ 17 ಮಂದಿಯು ಗೆಲುವು ಸಾಧಿಸಿ ಭರ್ಜರಿ ಜಯ ದಾಖಲಿಸಿದ್ದಾರೆ. ಆ ಮೂಲಕ ಧಾನ್ಯವರ್ತಕರ ಸಂಘದ ಬೆಂಬಲಿತರು ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಂತಾಗಿದೆ.

ಜಿ.ಎಸ್​.ಬಸವರಾಜು (ಬೆನಕ) ನೇತೃತ್ವದ ತಂಡವು 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತೀವ್ರ ಪೈಪೋಟಿ ನೀಡಿತ್ತಾದರೂ ಯಾರೊಬ್ಬರು ಗೆಲುವಿನ ದಡ ಮಟ್ಟಿಲ್ಲ. ಪ್ರತಿಷ್ಠಿತ ಟಿಜಿಎಂಸಿ ಬ್ಯಾಂಕ್​ನಲ್ಲಿ 16 ಸಾವಿರಕ್ಕು ಹೆಚ್ಚು ಸದಸ್ಯರಿದ್ದು 4810 ಸದಸ್ಯರು ಮಾತ್ರ ಮತಹಕ್ಕು ಹೊಂದಿದ್ದರು. ಹೆಚ್ಚುವರಿಯಾಗಿ 567 ಸದಸ್ಯರು ಹೈಕೋರ್ಟ್​ ಮೆಟ್ಟಿಲೇರಿ ಮತಹಕ್ಕು ಪಡೆದ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ಹೈಕೋರ್ಟ್​ ಅಂತಿಮ ತೀರ್ಪು ಹೊರಬೀಳುವವರೆಗೆ ಮುಂದೂಡಲಾಗಿತ್ತು.

ಮಂಗಳವಾರ ಮತ ಎಣಿಕೆ: ಹೈಕೋರ್ಟ್​ ಆದೇಶ ತಲುಪಿದ ಬಳಿಕ ಚುನಾವಣಾಧಿಕಾರಿ ಕೆ.ಎಸ್​.ಹರೀಶ್​ ಕುಮಾರ್​ ಮಂಗಳವಾರ ಮತ ಎಣಿಕೆ ಪ್ರಕ್ರಿಯೆ ನಡೆಸಿ, ಚುನಾಯಿತರ ಹೆಸರನ್ನು ಘೋಷಿಸಿದರು. ಪರಿಶಿಷ್ಟ ಜಾತಿ 1 ಸ್ಥಾನಕ್ಕೆ ತುಕಾರಾಂನಾಯ್ಕ್​ ಹಾಗೂ ಒಬಿಸಿ 1 ಸ್ಥಾನಕ್ಕೆ ಸುರೇಶ್​ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಎಚ್​.ಎಂ.ದಿವ್ಯಾನಂದ ಮೂರ್ತಿ (2532), ಸಿ.ಆರ್​.ನಟರಾಜ್​ (2523), ಎನ್​.ಆರ್​.ಅಕ್ಷಯ್​ (2604), ಎಂ.ದೀಪಕ್​ (2430), ಸಿ.ಎಲ್​.ನಟರಾಜ್​ (2478), ಎಸ್​.ಬಿ.ಪ್ರಭು (2500), ಎಚ್​.ಜಿ.ಪಾಯೇಶ್​ ಕುಮಾರ್​ (2436), ಬಲರಾಮಶೆಟ್ಟಿ (2486), ಟಿ.ಡಿ.ಬಾಹುಬಲಿಬಾಬು (2469), ಎಂ.ಪಿ.ಮಹೇಶ್​ (2475 ), ಜಿ.ಎಸ್​.ರಮೇಶ್​ (2385 ), ಟಿ.ಎಸ್​.ರೇವಂತ್​ ( 2297) ಹಾಗೂ

ಮಹಿಳಾ ಮೀಸಲು ಸ್ಥಾನದಿಂದ ಸ್ಪರ್ಧಿಸಿದ್ದ ಎಂ.ನಯನ ( 2479), ಬಿ.ವಿ.ರಶ್ಮಿ (2377)

ಪರಿಶಿಷ್ಟ ಪಂಗಡ ಕೆ.ರಾಮಯ್ಯ ( 2234), ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಡಿ.ವಿ.ಉಮೇಶ್​ (2448) ಚುನಾಯಿತರಾಗಿದ್ದಾರೆ.

ಎನ್​ ಆರ್​ ಮೊಮ್ಮಗನಿಗೆ ಅತಿಹೆಚ್ಚು ಮತ

ಟಿಜಿಎಂಸಿ ಬ್ಯಾಂಕ್​ ಮುಖವಾಣಿಯಾಗಿದ್ದ ದಿವಂಗತ ಎನ್​.ಆರ್​.ಜಗದೀಶ್​ ಮೊಮ್ಮಗ ಎನ್​.ಆರ್​. ಅಕ್ಷಯ್​ ಮೊದಲ ಬಾರಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದು ಅತಿಹೆಚ್ಚು 2604 ಮತ ಗಳಿಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಇನ್ನೂ ಟಿಜಿಎಂಸಿ ಬ್ಯಾಂಕ್​ ಮೇಲೆ ಎನ್​ ಆರ್​ ಕುಟುಂಬದ ಹಿಡಿತವಿರುವುದು ಸ್ಪಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net