

ವಿಜಯವಾಣಿ ಸುದ್ದಿಜಾಲ ಬೈಂದೂರು
ವಾಣಿಜ್ಯೀಕರಣದತ್ತ ಸಾಗುತ್ತಿರುವ ಶಿಕ್ಷಣ ಸಂಸ್ಥೆಗಳ ನಡುವೆ ಖಂಬದಕೋಣೆಯ ಆರ್.ಕೆ.ಸಂಜೀವ ರಾವ್ ಸ್ಮಾರಕ ದತ್ತಿನಿಧಿ ನಾಗೂರಿನಲ್ಲಿ ನಡೆಸುತ್ತಿರುವ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಶೈಕ್ಷಣಿಕ ಮೌಲ್ಯಗಳಿಗೆ ಬದ್ಧವಾಗಿ ಭಿನ್ನತೆ ಮೆರೆಯುತ್ತಿದೆ. ಜನರ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ನಾರಾಯಣ ಶೆಟ್ಟಿ ಹೇಳಿದರು.
ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಹಾಗೂ ಸ್ಥಾಪನಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರ ಮತ್ತು ಲೇಖಕಿ ಉಪ್ಪುಂದ ವರಮಹಾಲಕ್ಷ್ಮೀ ಹೊಳ್ಳ ಅವರಿಗೆ ಸಂಸ್ಥಾಪಕರ ದಿನದ ಗೌರವಾರ್ಪಣೆ ನಡೆಯಿತು. ಕಲಾಕೇಂದ್ರ ಪರವಾಗಿ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸನ್ಮಾನ ಸ್ವೀಕರಿಸಿದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯಕ್, ಆಡಳಿತ ಮಂಡಳಿಯ ಡಾ.ಅಶೋಕ ಕುಂದಾಪುರ, ಪ್ರಮೀಳಾ ಕುಂದಾಪುರ, ಶರ್ಮಿಳಾ ರಾವ್, ಸಹಾಯಕ ಮುಖ್ಯ ಶಿಕ್ಷಕಿ ಜ್ಯೋತಿ ಎಸ್.ಮಯ್ಯ, ಸಲಹೆಗಾರ ಎಸ್.ಜನಾರ್ದನ ಮರವಂತೆ, ವಿದ್ಯಾರ್ಥಿ ನಾಯಕಿ ಫಲಾಕ್ ಅರಾ ಇದ್ದರು.
ಸಂಜೀವ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಸಂಜೀತ್ ಪ್ರಕಾಶ್ ರಾವ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಬಿಜೂರು ವಿಶ್ವೇಶ್ವರ ಅಡಿಗ ಶಾಲಾ ವರದಿಯನ್ನು, ವಿದ್ಯಾರ್ಥಿನಾಯಕ ಸತ್ಯ ಆರ್. ನಾಯರಿ ವಿದ್ಯಾರ್ಥಿ ವೇದಿಕೆಯ ವರದಿ ಮಂಡಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಕ ರಾಜೇಶ್ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರೇಯಾ ಶೆಟ್ಟಿ, ಗೌತಮಿ, ಸ್ಪೂರ್ತಿ ನಿರೂಪಿಸಿದರು.